ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ಉನ್ನಾವೊ ಅಪಘಾತ ತನಿಖೆಯನ್ನು 7 ದಿನಗಳೊಳಗೆ ಪೂರ್ಣಗೊಳಿಸಿ; ಸಿಬಿಐಗೆ 'ಸುಪ್ರೀಂ' ಆದೇಶ

ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಕುಟುಂಬದ ಅಪಘಾತ ಕೇಸಿನ ತನಿಖೆಯನ್ನು 7 ದಿನಗಳೊಳಗೆ ...
ನವದೆಹಲಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಕುಟುಂಬದ ಅಪಘಾತ ಕೇಸಿನ ತನಿಖೆಯನ್ನು 7 ದಿನಗಳೊಳಗೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶ ನೀಡಿದೆ. 
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆ ನಡೆಸಿದ್ದು ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ಚಿಕಿತ್ಸೆಗಾಗಿ ದಾಖಲಾಗಿರುವ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಗುರುವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಇವರಿಬ್ಬರ ಆರೋಗ್ಯ ಪರಿಸ್ಥಿತಿ ಹೇಗಿದೆ ಮತ್ತು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್ ಆಂಬ್ಯುಲೆನ್ಸ್ ಮೂಲಕ ವರ್ಗಾಯಿಸಲು ಸಾಧ್ಯವಾಗಬಹುದೆ ಎಂದು ನ್ಯಾಯಾಲಯಕ್ಕೆ ತಿಳಿಸುವಂತೆ ಸೂಚಿಸಿದೆ.
ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹೂಡಿರುವ ಟ್ರಕ್ ಅಪಘಾತ ಕೇಸು ಸೇರಿದಂತೆ ಎಲ್ಲಾ 5 ಕೇಸುಗಳನ್ನು ದೆಹಲಿಗೆ ವರ್ಗಾಯಿಸಲಾಗುವುದು. ಸಿಬಿಐ ಅಪಘಾತ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು 30 ದಿನಗಳ ಸಮಯಾವಕಾಶ ಕೇಳಿದೆ, ಆದರೆ ಇದು ತುರ್ತು ವಿಚಾರಣೆಯಾಗಿರುವುದರಿಂದ 7 ದಿನಗಳೊಳಗೆ ತನಿಖೆ ಪೂರ್ಣಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಂದಿನ ವಿಚಾರಣೆಯಲ್ಲಿ ಸರ್ಕಾರಿ ಪರ ವಕೀಲ ತುಶಾರ್ ಮೆಹ್ತಾ ನ್ಯಾಯಾಲಯಕ್ಕೆ ವಾದ ಮಂಡಿಸಿ ನಾಲ್ಕು ಕೇಸುಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದರು. ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿನ ಬಗ್ಗೆ ವರದಿ ಕೇಳಿದರು.
ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಮತ್ತೆ ಸೇರಲಿರುವ ನ್ಯಾಯಾಲಯ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆ ಪರ ವಕೀಲೆಯನ್ನು ಚಿಕಿತ್ಸೆಗೆ ದೆಹಲಿಗೆ ಏರ್ ಆಂಬ್ಯುಲೆನ್ಸ್ ಮೂಲಕ ಲಿಫ್ಟ್ ಮಾಡುವುದು, ಕೇಸುಗಳನ್ನು ದೆಹಲಿಗೆ ವರ್ಗಾಯಿಸುವುದರ ಬಗ್ಗೆ ತೀರ್ಪು ಪ್ರಕಟಿಸಲಿದೆ. 

Related Stories

No stories found.

Advertisement

X
Kannada Prabha
www.kannadaprabha.com