ಉನ್ನಾವ್ ನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ, ಜಿಲ್ಲಾ ನ್ಯಾಯಾದೀಶರ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನ!
ಲಖನೌ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಉನ್ನಾವೋ ಬಿಜೆಪಿ ಮುಖಂಡ ಕುಲದೀಪ್ ಸೆಂಗಾರ್ ವಿರುದ್ಧದ ಅತ್ಯಾಚಾರ ಪ್ರಕರಣ ಹಸಿರಾಗಿರುವಂತೆಯೇ ಇಲ್ಲಿಯೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯ ಕೇಳಲು ಬಂದ ಸಂತ್ರಸ್ಥೆಗೆ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ಸಂತ್ರಸ್ಥೆ ಮತ್ತು ಆಕೆಯ ತಾಯಿ ಜಿಲ್ಲಾ ನ್ಯಾಯಾದೀಶರ ಕಚೇರಿ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಮತ್ತು ಪೊಲೀಸರು ಸಂತ್ರಸ್ಥರನ್ನು ರಕ್ಷಿಸಿದ್ದಾರೆ.
ಮೂಲಗಳ ಪ್ರಕಾರ ಇಲ್ಲಿನ ಮಖಿ ಗ್ರಾಮದಲ್ಲಿ ಯುವತಿಯನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಕುರಿತಂತೆ ಸಂತ್ರಸ್ಥ ಯುವತಿ ಮತ್ತು ಆಕೆಯ ತಾಯಿ ದೂರು ದಾಖಲಿಸಿದ್ದಾರೆ. ಆದರೆ ದುಷ್ಕರ್ಮಿಗಳು ದೂರಿಗೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಈ ಕುರಿತಂತೆ ಸಂತ್ರಸ್ಥರು ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಕಠಿಣ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ಸಂತ್ರಸ್ಥರು ಜಿಲ್ಲಾ ನ್ಯಾಯಾಧೀಶರ ಕಚೇರಿ ಎದುರೇ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ತ್ರಿಪಾಠಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಮಾತೇ ಇಲ್ಲ. ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬಾಕಿ ಇರುವ ಇಬ್ಬರು ಆರೋಪಿಗಳನ್ನೂ ಬಂಧಿಸಲು ಬಲೆ ಬೀಸಿದ್ದೇವೆ. ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ