ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಪ್ರತಿಭಟನೆ: ಆತಂಕದಿಂದ ಕ್ಯಾಂಪಸ್ ತೊರೆದ ಹಲವು ವಿದ್ಯಾರ್ಥಿನಿಯರು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಪರಿಸ್ಥಿತಿ ಉದ್ವಿಗ್ನವಾಗಿದ್ದು ಸುರಕ್ಷತೆಗಾಗಿ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಊರು, ಮನೆಗಳಿಗೆ ಹೋಗುತ್ತಿದ್ದಾರೆ.
ವಿದ್ಯಾರ್ಥಿಗಳು ಮನೆಗಳಿಗೆ ತೆರಳುತ್ತಿರುವುದು
ವಿದ್ಯಾರ್ಥಿಗಳು ಮನೆಗಳಿಗೆ ತೆರಳುತ್ತಿರುವುದು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಪರಿಸ್ಥಿತಿ ಉದ್ವಿಗ್ನವಾಗಿದ್ದು ಸುರಕ್ಷತೆಗಾಗಿ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಊರು, ಮನೆಗಳಿಗೆ ಹೋಗುತ್ತಿದ್ದಾರೆ.


ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಹೋಗಿದ್ದರಿಂದ ಅದು ನಿನ್ನೆ ಅಕ್ಷರಶಃ ಯುದ್ಧಭೂಮಿಯಂತಾಗಿತ್ತು. ಈ ಹಿನ್ನಲೆಯಲ್ಲಿ ಭೀತರಾಗಿರುವ ಅನೇಕ ವಿದ್ಯಾರ್ಥಿನಿಯರು ಇಂದು ತಮ್ಮ ಮನೆಗಳಿಗೆ ಹೋಗುತ್ತಿದ್ದಾರೆ.ಕ್ಯಾಂಪಸ್ ಒಳಗೆ ತಮಗೆ ಸುರಕ್ಷತೆಯಿಲ್ಲ ಎಂದು ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಮೊನ್ನೆ ಶನಿವಾರದಿಂದ ಜನವರಿ 5ರವರೆಗೆ ಚಳಿಗಾಲದ ರಜಾ ಅವಧಿ ಘೋಷಿಸಲಾಗಿತ್ತು. ಪರೀಕ್ಷೆಯನ್ನು ಸಹ ಇದೀಗ ಮುಂದೂಡಲಾಗಿದೆ. 


ಇಂದು ವಿಶ್ವವಿದ್ಯಾಲಯದ ಹೊರಗೆ ಚಳಿಯಲ್ಲಿ ಬರಿಮೈಯಲ್ಲಿ ನಿಂತ ವಿದ್ಯಾರ್ಥಿಗಳು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ತಮ್ಮ ಸಹೋದ್ಯೋಗಿಗಳ ಜೊತೆ ಸೇರಿದ ವಿದ್ಯಾರ್ಥಿಗಳು ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಮೆರವಣಿಗೆ ಸಾಗಿದರು.


ನಮ್ಮ ಸಹಪಾಠಿಗಳಿಗೆ ಪೊಲೀಸರು ವಿನಾಕಾರಣ ಹೊಡೆದಿದ್ದಾರೆ, ಕ್ರೂರವಾಗಿ ನಡೆಸಿಕೊಂಡಿದ್ದಾರೆ. ಪೊಲೀಸರು ಬಾತ್ ರೂಂ, ಲೈಬ್ರೆರಿಗಳಿಗೆ ಹೋಗಿ ಹುಡುಗಿಯರಿಗೆ ಸಹ ಹೊಡೆದಿದ್ದಾರೆ. ನಮ್ಮ ಪ್ರತಿಭಟನೆ ದೆಹಲಿ ಪೊಲೀಸರ ವಿರುದ್ಧವಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.


ಪೊಲೀಸರು ಒಳನುಗ್ಗಿದಾಗ ನಾವು ವಿಶ್ವವಿದ್ಯಾಲಯ ಒಳಗಿದ್ದೆವು. ಸುಮಾರು 20 ಪೊಲೀಸರು ಗೇಟ್ ನಂಬರ್ 7ಗೆ ಬಂದು ಪಕ್ಕದ ಗೇಟ್ ನಿಂದ 50 ಮಂದಿ ಬಂದರು. ನಾವು ಹಿಂಸಾಚಾರದಲ್ಲಿ ತೊಡಗಿಲ್ಲ ಎಂದು ನಾವು ಹೇಳಿದರೂ ಕೇಳಲಿಲ್ಲ. ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ. ವಿದ್ಯಾರ್ಥಿನಿಯರನ್ನು ಸಹ ಬಿಡಲಿಲ್ಲ, ದೆಹಲಿ ಪೊಲೀಸರು ನಮ್ಮನ್ನು ನಡೆಸಿಕೊಂಡ ರೀತಿ ವಿರುದ್ಧ ನಮ್ಮ ಪ್ರತಿಭಟನೆ ಎಂದು ವಿದ್ಯಾರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com