ಅವರು ತಮ್ಮ ಭ್ರಮೆಯಲ್ಲಿಯೇ ಇರಲಿ ಬಿಡಿ: ಪೌರತ್ವ ಕಾಯ್ದೆಗೆ ಬೆಂಬಲ ನೀಡಿದ ಮುಸ್ಲಿಂ ಮೌಲ್ವಿಗಳ ವಿರುದ್ಧ ಓವೈಸಿ ಕಿಡಿ
ಹೈದರಾಬಾದ್: ಪೌರತ್ವ ಕಾಯ್ದೆ ತಿದ್ದುಪಡಿಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಮೌಲ್ವಿಗಳ ವಿರದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇಡೀ ದೇಶವೇ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೆ, ಅದು ಅವರಿಗೆ ಲೆಕ್ಕಕ್ಕಿಲ್ಲ. ಅವರು ಮಾತನಾಡಲಿ ಬಿಡಿ. ಅದು ಯಾವ ವಿಚಾರವೂ ಅಲ್ಲ. ಇಡೀ ದೇಶ ಒಂದು ದಿಕ್ಕಿನಲ್ಲಿ ಚಲಿಸುತ್ತಿದೆ. ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಜನರು ಸಾಯುತ್ತಿದ್ದಾರೆ. ವಿದ್ಯಾರ್ಥಿಗಳು ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪೌರತ್ವ ಕಾಯ್ದೆ ಮತ್ತು ಎನ್ಆರ್'ಸಿ ಯಿಂದ ಜನರು ತಲೆಕೆಡಿಸಿಕೊಂಡಿದ್ದಾರೆ. ಆದರೆ, ಮುಸ್ಲಿಂ ಮೌಲ್ವಿಗಳಿಗೆ ಅದು ಲೆಕ್ಕವಿಲ್ಲ. ಅವರು ಅವದ್ದೇ ಆದ ಭ್ರಮೆಯಲ್ಲಿದ್ದಾರೆಂದು ಹೇಳಿದ್ದಾರೆ.
ಕಾಯ್ದೆಯನ್ನು ನಾವು ತೀವ್ರವಾಗಿ ಖಂಡಿಸಬೇಕು. ಪೊಲೀಸರ ಅನುಮತಿ ಪಡೆದು ಶಾಂತಿಯುತವಾಗಿ ಪ್ರತಿಭಟಿಸಬೇಕು. ಲಖನೌ ಹಾಗೂ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮಂಗಳೂರಿನಲ್ಲಿ ಇಬ್ಬರು ಮುಸ್ಲಿಮರು ಸಾವನ್ನಪ್ಪಿದ್ದಾರೆ. ಹಿಂಸಾಚಾರ ನಡೆದಾಗ ಅದನ್ನು ಖಂಡಿಸಬೇಕು. ಇಂತಹ ಹಿಂಸಾಚಾರದಿಂದ ನಾವು ದೂರ ಉಳಿಯಬೇಕು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ