ದೆಹಲಿಯಲ್ಲಿ ಇಂದು ಪ್ರಧಾನಿ ಮೆಗಾ ರ್ಯಾಲಿ: ತೀವ್ರ ಭದ್ರತೆ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರಸ್ತಾಪ? 

ಭಾರತೀಯ ಜನತಾ ಪಾರ್ಟಿ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಈ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿರುವುದರಿಂದ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತೀಯ ಜನತಾ ಪಾರ್ಟಿ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಈ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿರುವುದರಿಂದ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದೆ.


ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರವಾಗಿರುವುದರಿಂದ ಪ್ರಧಾನಿ ರ್ಯಾಲಿ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಕಳೆದ ಶುಕ್ರವಾರ ಹಳೆ ದೆಹಲಿಯ ದರ್ಯಗಂಜ್ ಪ್ರದೇಶದಲ್ಲಿ ಹಿಂಸಾಚಾರ ನಡೆದು ಜನರು ಮೃತಪಟ್ಟಿರುವ ಘಟನೆ ನಂತರ ರಾಮಲೀಲಾ ಮೈದಾನ ಅಲ್ಲಿಂದ ಕೆಲವೇ ಅಂತರಗಳ ದೂರದಲ್ಲಿರುವುದರಿಂದ ಪ್ರಧಾನಿಯವರ ಇಂದಿನ ರ್ಯಾಲಿಗೆ ನಿನ್ನೆಯಿಂದಲೇ ತೀವ್ರ ಭದ್ರತೆ ಕಲ್ಪಿಸಲಾಗಿದೆ.


ರಾಮಲೀಲಾ ಮೈದಾನದ ಹೊರಗೆ 20 ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು ಪ್ರತಿಯೊಂದು ತುಕಡಿಯಲ್ಲಿಯೂ 70ರಿಂದ 80 ಮಂದಿ ಪೊಲೀಸರಿರುತ್ತಾರೆ. 20 ಡಿಸಿಪಿ ಮಟ್ಟದ ಅಧಿಕಾರಿಗಳಿರುತ್ತಾರೆ. ಸುಮಾರು ಸಾವಿರ ಸ್ಥಳೀಯ ಪೊಲೀಸ್ ಸಿಬ್ಬಂದಿ, ಡ್ರೋನ್ ವಿರೋಧಿ ತಂಡ ಮತ್ತು ಎನ್ ಎಸ್ ಜಿ ಕಮಾಂಡೊಗಳು ಸಹ ಇರುತ್ತಾರೆ. ರಾಮಲೀಲಾ ಮೈದಾನ ಸುತ್ತಮುತ್ತ ಪ್ರತಿ ಪ್ರದೇಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. 


ಬಹುಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದು ಸಿಸಿಟಿವಿ ಕಣ್ಗಾವಲನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದ ವೇಳೆ ಭದ್ರತೆ ವ್ಯವಸ್ಥೆ ಕೈಗೊಂಡಿರುವ ಬಗ್ಗೆ ದೆಹಲಿ ಪೊಲೀಸರು ಎಸ್ ಪಿಜಿ ಮತ್ತು ಭಾರತೀಯ ಜನತಾ ಪಾರ್ಟಿ ಜೊತೆ ಸಂಪರ್ಕದಲ್ಲಿದ್ದಾರೆ.
ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರ ಪೋಸ್ಟರ್ ಗಳು ರಾರಾಜಿಸುತ್ತಿವೆ. ದೆಹಲಿ ವಿಧಾನಸಭೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವ ಹವಣಿಕೆಯಲ್ಲಿ ಬಿಜೆಪಿ ಇದ್ದು, ಇದಕ್ಕೆ ಸಹ ಸಾಕಷ್ಟು ಸಿದ್ದತೆ ಮಾಡಿಕೊಂಡಿದೆ.


ದೆಹಲಿಯಲ್ಲಿರುವ ಅನಧಿಕೃತ 1,731 ಕಾಲೊನಿಗಳಲ್ಲಿರುವ ಸುಮಾರು 40 ಲಕ್ಷ ಜನರಿಗೆ ಪ್ರಧಾನಿಯವರು ಮಾಲೀಕತ್ವದ ಹಕ್ಕು ನೀಡಿರುವ ಹಿನ್ನಲೆಯಲ್ಲಿ ಅವರಿಗೆ ಧನ್ಯವಾದ ತಿಳಿಸುವ ಸಲುವಾಗಿ ಈ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ನಾಯಕ ವಿಜಯ್ ಗೋಯಲ್ ತಿಳಿಸಿದ್ದಾರೆ.


ಸಿಎಎ ಬಗ್ಗೆ ಮಾತನಾಡುತ್ತಾರಾ ಮೋದಿ?: ಇಂದು ಬೆಳಗ್ಗೆ 11.30ರ ಸುಮಾರಿಗೆ ಪ್ರಧಾನಿ ಮೋದಿಯವರು ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದು ತಮ್ಮ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ. ಹೊಸ ಕಾಯ್ದೆಯಿಂದ ದೇಶದ ಮುಸಲ್ಮಾನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳುವ ಸಾಧ್ಯತೆಯಿದೆ. ಭಾರತೀಯರ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಸಹ ಅವರು ಮತ್ತೊಮ್ಮೆ ಭರವಸೆ ನೀಡುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com