ದೇಶ
ಕಾಶ್ಮೀರದಿಂದ 7 ಸಾವಿರ ಅರೆಸೇನಾ ಪಡೆ ಹಿಂಪಡೆಯಲು ಕೇಂದ್ರ ಗೃಹ ಸಚಿವಾಲಯ ಆದೇಶ
ಕಾಶ್ಮೀರದಲ್ಲಿ ಭದ್ರತಾ ಪರಿಶೀಲನೆ ನಂತರ ಕೂಡಲೇ 7 ಸಾವಿರ ಅರೆಸೇನಾ ಪಡೆಯನ್ನು ಹಿಂಪಡೆಯಲು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಕಾಶ್ಮೀರದಲ್ಲಿ ಭದ್ರತಾ ಪರಿಶೀಲನೆ ನಂತರ ಕೂಡಲೇ 7 ಸಾವಿರ ಅರೆಸೇನಾ ಪಡೆಯನ್ನು ಹಿಂಪಡೆಯಲು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಒಟ್ಟು 72 ತುಕಡಿಗಳನ್ನು ತಮ್ಮ ಕ್ಷೇತ್ರಗಳಿಗೆ ಮರಳುವಂತೆ ಆದೇಶಿಸಲಾಗಿದೆ. ಇಂತಹ ಒಂದು ತುಕಡಿಯಲ್ಲಿ 100 ಸೈನಿಕರು ಇರುತ್ತಾರೆ ಎಂದು ಅವರು ಹೇಳಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಸಂವಿಧಾನದ ಕಲಂ 370 ರದ್ದುಗೊಳಿಸಿದ ನಂತರ ಸಿಆರ್ ಪಿಎಫ್, ಬಿಎಸ್ ಎಫ್, ಐಟಿಬಿಪಿ, ಸಿಐಎಸ್ ಎಫ್ ಮತ್ತು ಎಸ್ ಎಸ್ ಬಿಯನ್ನು ಕಣಿವೆ ಪ್ರದೇಶದಲ್ಲಿನ ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಸೋಮವಾರ ಹೊರಡಿಸಿರುವ ಆದೇಶದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 24 ತುಕಡಿಗಳು, ಬಿಎಸ್ ಎಫ್, ಸಿಐಎಸ್ ಎಫ್, ಐಟಿಬಿಪಿ ಮತ್ತು ಸಶಸ್ತ್ರ ಸೀಮಾ ಬಲದ ತಲಾ 12 ತುಕಡಿಗಳನ್ನು ಮರಳಿ ತಮ್ಮ ಕ್ಷೇತ್ರಗಳಿಗೆ ಕಳುಹಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಇಂತಹ 20 ತುಕಡಿಗಳನ್ನು ಹಿಂಪಡೆಯಲಾಗಿತ್ತು.