'ಮಹಾರಾಷ್ಟ್ರದಲ್ಲಿರುವುದು ಅಲ್ಪಕಾಲಿಕ ಸರ್ಕಾರ:  ಮತ್ತೊಮ್ಮೆ ಬಿಜೆಪಿ  ಸರ್ಕಾರ ರಚನೆಯಾಗಲಿದೆ'

ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಭವಿಷ್ಯ ನುಡಿದಿದ್ದಾರೆ.
ರಾಮದಾಸ್ ಅಠಾವಳೆ
ರಾಮದಾಸ್ ಅಠಾವಳೆ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಭವಿಷ್ಯ ನುಡಿದಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್‌‌ಸಿಪಿ ಶಿವಸೇನೆಗೆ ನೀಡಿದ ಬೆಂಬಲವನ್ನು ಕಾಂಗ್ರೆಸ್ ಭವಿಷ್ಯದಲ್ಲಿ ಹಿಂಪಡೆಯುವ ಸಾಧ್ಯತೆಯೇ ಹೆಚ್ಚಾಗಿದ್ದು ಕಾಂಗ್ರೆಸ್‌ ಹೊರಬಂದರೆ ಶಿವಸೇನಾ-ಎನ್‌ಸಿಪಿ ಪಕ್ಷಗಳು ಮತ್ತೆ ಬಿಜೆಪಿಯ ಬಳಿ ಬರಲೇಬೇಕು ಎಂದರು.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಸರ್ಕಾರ ಅಲ್ಪಕಾಲಿಕ. ಉದ್ಭವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದು, ಸರ್ಕಾರ ರಚನೆಯಾಗಿ ಒಂದು ತಿಂಗಳಾದರೂ ಇನ್ನೂ ಸಂಪುಟ ವಿಸ್ತರಣೆಯೇ ಆಗಿಲ್ಲ. ಈಗಾಗಲೇ ಈ ಮೈತ್ರಿ ಪಕ್ಷಗಳಲ್ಲಿ ಒಡಕು ಕಂಡುಬಂದಿದ್ದು, ಕಾಂಗ್ರೆಸ್ ಹೊರಬರುವ ಸಾಧ್ಯತೆಯೇ ಹೆಚ್ಚಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ವಿ.ಡಿ.ಸಾವರ್ಕರ್ ವಿಚಾರದಲ್ಲಿ ಶಿವಸೇನಾ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ವಿವಾದವುಂಟಾಗಿದೆ. ಇಂತಹ ಹಲವು ವಿವಾದಗಳು ಇನ್ನೂ ನಡೆಯಲಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಶಿವಸೇನೆ ಹಾಗೂ ಎನ್‌ಸಿಪಿಗೆ ನೀಡಿದ ಬೆಂಬಲ ಹಿಂಪಡೆಯುವ ಸಾಧ್ಯತೆಯೇ ಹೆಚ್ಚಾಗಿದೆ. ಆಗ ಎನ್‌ಸಿಪಿ ಅಥವಾ ಶಿವಸೇನೆ ಮತ್ತೆ ಬಿಜೆಪಿಯ ಕಡೆ ಮುಖ ಮಾಡಲೇಬೇಕು. ಆಗ ಎನ್‌ಸಿಪಿ ಜೊತೆಗೋ ಅಥವಾ ಶಿವಸೇನೆ ಜೊತೆಗೂ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆಯೇ ನಿಚ್ಚಳವಾಗಿದೆ ಎಂದು ರಾಮ್‌ದಾಸ್ ಅಠಾವಳೆ ಸ್ಪಷ್ಟಪಡಿಸಿದರು.

ಪೌರತ್ವ ಕಾಯ್ದೆ ಜಾರಿಯಿಂದ ಯಾವುದೇ ಮುಸಲ್ಮಾನರಿಗೆ ತೊಂದರೆಯಾಗುವುದಿಲ್ಲ. ಇದು ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ದೇಶದಿಂದ ಅಕ್ರಮವಾಗಿ ವಲಸೆ ಬಂದ ಜೈನ, ಸಿಖ್, ಬೌದ್ಧ ಸೇರಿದಂತೆ ನಿರ್ದಿಷ್ಟ ಧರ್ಮದವರಿಗೂ ಅನ್ವಯವಾಗಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಮೂಲ ದಾಖಲೆ ಹೊಂದಿರುವವರಿಗೆ ಕಾಯಿದೆಯಿಂದ ಯಾವುದೇ ತೊಂದರೆಯಾಗದು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ನಾಯಕರು, ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಾರ್ಟಿ ಸೇರಿದಂತೆ ವಿಪಕ್ಷ ನಾಯಕರು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಎನ್ಆರ್ ಸಿ ಕಾನೂನು ಅಸ್ಸಾಂ ನಲ್ಲಿ‌ ಮಾತ್ರ ಅನ್ವಯವಾಗುತ್ತದೆ ಎಂದರು.

ರಾಜ್ಯಸಭೆ, ಲೋಕಸಭೆ ಎರಡರಲ್ಲಿಯೂ ಪೌರತ್ವ ಕಾಯಿದೆ ಚರ್ಚೆಯಾಗಿ ಬಹುಮತ ಸಿಕ್ಕ ಮೇಲೆಯೇ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸಲು ಹೊರಟಿದ್ದು. ವಿನಾಕಾರಣ ವಿಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿವೆ. ಮಹಾರಾಷ್ಟ್ರವೂ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಕಾಯಿದೆ ಜಾರಿಯಾಗಲಿದೆ. ಕಾಯಿದೆ ಬಗ್ಗೆ ಏನಾದರೂ ಸಲಹೆಗಳಿದ್ದರೆ ಅವುಗಳನ್ನು ಮುಕ್ತವಾಗಿ ಸ್ವೀಕರಿಸಿ ಸಂಸತ್ತಿನಲ್ಲಿ ಚರ್ಚಿಸಲಾಗುವುದು ಎಂದರು.

ಸಂಸತ್ತಿನಲ್ಲಿ ತ್ರಿವಳಿ ತಲಾಖ್,‌ ಕಾಶ್ಮೀರದಲ್ಲಿ‌ 370 ವಿಧಿ ರದ್ದು ಮಾಡಿದಾಗಲೂ ಹಾಗೂ ಸುಪ್ರೀಂಕೋರ್ಟ್ ರಾಮಜನ್ಮಭೂಮಿ ವಿವಾದದಲ್ಲಿ ತೀರ್ಪು ನೀಡಿದಾಗಲೂ ಮುಸ್ಲಿಮರು ಅದೆಲ್ಲವನ್ನೂ ಮೌನವಾಗಿ ಸ್ವೀಕರಿಸಿ‌ ಒಪ್ಪಿಗೆ ನೀಡಿದ್ದಾರೆ. ಆದರೆ ಈಗ ಪೌರತ್ವ ವಿಚಾರದಲ್ಲಿ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರೆ ಅದು ಕಾಂಗ್ರೆಸ್ ಪಕ್ಷದ ಪಿತೂರಿಯಿಂದಲೇ ಹೊರತು ಬೇರೆನೂ ಅಲ್ಲ ಎಂದು ಅಠಾವಳೆ‌ ಹೇಳಿದರು.

ಜಾಮಿಯಾ ವಿಶ್ವವಿದ್ಯಾಲಯ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಪೊಲೀಸ್ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಗಲಭೆ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ ಎಂದರು. ಪ್ರತಿಭಟನಕಾರರು ಮೂಲತಃ ಉಗ್ರಸ್ವರೂಪದವರಾಗಿರುತ್ತಾರೆ‌. ಅವರನ್ನು ಹತೋಟಿಯಲ್ಲಿಡುವುದು ಒಮ್ಮೊಮ್ಮೆ ಪೊಲೀಸರಿಂದ ಕಷ್ಟ ಸಾಧ್ಯ. ಹೀಗಾಗಿ ಶಾಂತಿಗಾಗಿ ಪೊಲೀಸರು ಒಮ್ಮೊಮ್ಮೆ ಲಾಠಿ ಚಾರ್ಜ್, ಗುಂಡು ಹಾರಿಸುವುದನ್ನೂ ಸಹ ಮಾಡಬೇಕಾಗುತ್ತದೆ. ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಪ್ರಕರಣವನ್ನು ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಸಿಐಡಿ ವಹಿಸಿದ್ದು, ತನಿಖೆಯಲ್ಲಿ ಪೊಲೀಸರದ್ದೇ ತಪ್ಪು ಎಂದು ಸಾಬೀತಾದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಿದ್ದಾರೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ‌ ಸಾಲಿಗ್ರಾಮ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ಯಡಿಯೂರಪ್ಪ‌ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಅವರ ಬೇಡಿಕೆಯಂತೆ ದಲಿತರ ಕಾಲೋನಿಗೆ ಅಂಬೇಡ್ಕರ್‌ ಕಾಲೋನಿ ಎಂದು ಹೆಸರಿಡಬೇಕು ಹಾಗೂ ಕಾಲೋನಿಯಲ್ಲಿ ಒಂದು ಎಕರೆ ಭೂಮಿ ದಲಿತರಿಗೆ ಆರ್‌ಸಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಸೂಚಿಸಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹ್ಮದ್ ಶಕೀಲ್ ಷರೀಫ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅಲ್ಪಸಂಖ್ಯಾತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಎಸ್‌ಪಿ ಕಾಯಿದೆ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿದ್ದು, ಇವರ ಮಾತಿಗೆ ಯಾವುದೇ ಮುಸಲ್ಮಾನರು ಬೆಲೆ ಕೊಡಬಾರದು. ಯಾವುದೇ ಮುಸ್ಲಿಮರಿಗೆ‌ ಕಾಯಿದೆಯಿಂದ ತೊಂದರೆಯಾಗುವುದಿಲ್ಲ. ಕಾಂಗ್ರೆಸ್‌ನ ಓಬಿಸಿ ಅಧ್ಯಕ್ಷರು ಎರಡು ಕಡೆ ರೊಟ್ಟಿ ಬೇಯಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com