ಸಚಿವ ಗಡ್ಕರಿ ಕಾರ್ಯ ವೈಖರಿಗೆ ಮೇಜು ಕುಟ್ಟಿ ಸೋನಿಯಾ ಗಾಂಧಿ ಮೆಚ್ಚುಗೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಂತರ ಇದೀಗ ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ....
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Updated on
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಂತರ ಇದೀಗ ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದ್ದು, ದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆದ್ದಾರಿ ಸಚಿವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸಂಸದರ ಎರಡು ಪ್ರಶ್ನೆಗಳಿಗೆ ಉತ್ತರಿಸಿದ ಗಡ್ಕರಿ ಅವರು ತಾವು ಕಾರ್ಯರೂಪಕ್ಕೆ ತಂದ ಯೋಜನೆಗಳ ಬಗ್ಗೆ ಮತ್ತು ದೇಶದಲ್ಲಿ ರಸ್ತೆ ಸಂಪರ್ಕ ವಿಸ್ತರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಎಲ್ಲಾ ಸಂಸದರು ತಮ್ಮ ರಾಜಕೀಯ ಸಂಬಂಧಗಳನ್ನು ಬದಿಗಿಟ್ಟು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಮ್ಮ ಸಚಿವಾಲಯ ಮಾಡಿದ ಕೆಲಸಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಗಡ್ಕರಿ ಹೇಳಿದರು. ಈ ವೇಳೆ ಬಿಜೆಪಿ ಸದಸ್ಯರು ಮೇಜು ತಟ್ಟಿ ಗಡ್ಕರಿ ಅವರನ್ನು ಅಭಿನಂದಿಸಿದರು. 
ಸೋನಿಯಾ ಗಾಂಧಿ ಹಾಗೂ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ಸಹ ಮೇಜು ತಟ್ಟುವ ಮೂಲಕ ಗಡ್ಕರಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ ಅವರು, ಮೂಲ ಸೌಕರ್ಯ ಅಭಿವೃದ್ಧಿಗಾಗಿ ಗಡ್ಕರಿ ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದರು.
ಇತ್ತೀಚಿಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮನೆಯವರ ಬಗ್ಗೆ ಕಾಳಜಿ ವಹಿಸದವರು ದೇಶ ನಿರ್ವಹಿಸಲಾರರು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ ಗಡ್ಕರಿ ಅವರನ್ನು ಹಾಡಿ ಹೊಗಳಿದ್ದರು.
ಬಿಜೆಪಿಯಲ್ಲಿ ಗಟ್ಸ್ ಇರೋ ಏಕೈಕ ನಾಯಕ ಎಂದರೆ ನಿತಿನ್ ಗಡ್ಕರಿ ಅವರಾಗಿದ್ದು, ಅವರು ರಾಫೆಲ್ ಡೀಲ್, ರೈತರ ಸಮಸ್ಯೆ ಮತ್ತು ಕೇಂದ್ರ ಸಂಸ್ಥೆಗಳ ನಾಶದ ಬಗ್ಗೆಯೂ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com