ಕಾಶ್ಮೀರ ಸಮಸ್ಯೆ ಬಗೆಹರಿಸದಿದ್ದರೆ ಅನೇಕ ದಾಳಿಗಳು ನಡೆಯಬಹುದು: ಆತ್ಮಾಹುತಿ ದಾಳಿಕೋರ ಆದಿಲ್ ತಂದೆಯ ಮಾತು

ಕಾಶ್ಮೀರ ವಿವಾದವನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಹಲವು ಉಗ್ರಗಾಮಿ ದಾಳಿಗಳು ...
ಆದಿಲ್ ಅಹ್ಮದ್ ದಾರ್
ಆದಿಲ್ ಅಹ್ಮದ್ ದಾರ್

ಶ್ರೀನಗರ: ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಹಲವು ಉಗ್ರಗಾಮಿ ದಾಳಿಗಳು ನಡೆಯುವ ಸಾಧ್ಯತೆಯಿದೆ, ದೇಶಕ್ಕೆ ಇನ್ನೂ ಅಪಾಯವಿದೆ ಎಂದು ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾದ ಉಗ್ರನ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಪುತ್ರ ಮಾಡಿದ ಆತ್ಮಾಹುತಿ ಬಾಂಬ್ ದಾಳಿಯಿಂದ ಅನೇಕ ಯೋಧರು ಹುತಾತ್ಮರಾಗಿರುವುದು ನೋಡಿದರೆ ವಿಷಾದ, ಬೇಸರವಾಗುತ್ತದೆ. ಅದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಅತ್ಯಮೂಲ್ಯ ಜೀವಗಳು ಕಳೆದುಹೋಗಿವೆ. ಅದು ಉಗ್ರನಾಗಿರಲಿ, ನಾಗರಿಕನಾಗಿರಲಿ ಅಥವಾ ಯೋಧನಾಗಿರಲಿ, ಜೀವಗಳು ಕಳೆದುಹೋಗಿವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಕಳೆದ ವರ್ಷ ಭದ್ರತಾ ಪಡೆಯಿಂದ 250ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ. ಇವೆಲ್ಲಕ್ಕೂ ಪರಿಹಾರವೊಂದೇ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವುದು ಎಂದು 19 ವರ್ಷದ ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ ನ ತಂದೆ ಗುಲಾಮ್ ಹಸ್ಸನ್ ದಾರ್ ಹೇಳುತ್ತಾರೆ.

ಪುಲ್ವಾಮಾ ಜಿಲ್ಲೆಯಲ್ಲಿ ಮೊನ್ನೆ ನಡೆದ ಆತ್ಮಾಹುತಿ ದಾಳಿಯ ಸ್ಥಳದಿಂದ 5 ಕಿಲೋ ಮೀಟರ್ ದೂರದಲ್ಲಿ ಕಕಪೊರಾದ ಗಂಡಿಬಾಗ್ ಗ್ರಾಮದಲ್ಲಿ ಆದಿಲ್ ನ ಮನೆಯಿದೆ. ಇಲ್ಲಿಗೆ ಹೋಗಿದ್ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿ ಜೊತೆಗೆ ಮಾತನಾಡಿದ ಆದಿಲ್ ಅಹ್ಮದ್ ದಾರ್ ನ ತಂದೆ, ತನ್ನ ಮಗನ ದಾಳಿಗೆ ಹುತಾತ್ಮರಾದ ಯೋಧರು ಕುಟುಂಬ ಹೊಂದಿದ್ದಾರೆ. ಅವರಿಗೆ ಅವರದ್ದೇ ಆದ ಕನಸುಗಳು ಮತ್ತು ಆಸೆ-ಆಕಾಂಕ್ಷೆಗಳು ಇವೆ. ತನ್ನ ಮಗನು ಕೂಡ ಕುಟುಂಬ ಹೊಂದಿದ್ದಾನೆ. ನನ್ನ ಮಗ ಅಷ್ಟೊಂದು ಯೋಧರನ್ನು ಕೊಂದುಹಾಕಿದ್ದಕ್ಕೆ ನನಗೆ ನೋವಾಗಿದೆ. ಅವನು ಸತ್ತಿದ್ದು ಕೂಡ ನನಗೆ ನೋವುಂಟುಮಾಡಿದೆ. ನಾನು ಅವನ ಬಗ್ಗೆ ಅನೇಕ ಕನಸುಗಳನ್ನು ಕಂಡಿದ್ದೆ ಎಂದರು.

ಕಾಶ್ಮೀರ ವಿವಾದದಲ್ಲಿ ಭಾರತ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಕಾಶ್ಮೀರ ವಿವಾದ ಬಗೆಹರಿಸಲು ಭಾರತ ಸರ್ಕಾರ ಆದ್ಯತೆ ನೀಡಿ ಕಾರ್ಯಪ್ರವೃತ್ತರಾದರೆ ಒಳ್ಳೆಯದು. ಇದರಿಂದ ಯುವಕರು ಭಯೋತ್ಪಾದನೆಯ ಅಡ್ಡದಾರಿಯನ್ನು ಹಿಡಿಯಲು ಸಾಧ್ಯವಿಲ್ಲ. ಕಾಶ್ಮೀರ ಜನತೆಗೆ ಸ್ವಾತಂತ್ರ್ಯಕ್ಕಾಗಿ ಬಂದೂಕು ಹಿಡಿಯುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಆದಿಲ್ ಉಗ್ರಗಾಮಿಗಳ ಪಡೆಗೆ ಸೇರಿದ್ದು ಕಳೆದ ವರ್ಷ ಮಾರ್ಚ್ ನಲ್ಲಿ. ಆತ ಉಗ್ರಗಾಮಿಗಳ ಜೊತೆ ಹೋದ ನಂತರ ನಮ್ಮ ಸಂಪರ್ಕದಲ್ಲಿರಲಿಲ್ಲ. ಅವನು ಮನೆ ಬಿಟ್ಟು ಹೋಗುತ್ತಾನೆಂದು ನಮಗೆ ಗೊತ್ತಿರಲಿಲ್ಲ, ನಮಗೆ ಹೇಳಲೂ ಇಲ್ಲ. ಸಿಆರ್ ಪಿಎಫ್ ಬೆಂಗಾವಲು ವಾಹನದ ಮೇಲೆ ತಮ್ಮ ಮಗ ಆತ್ಮಾಹುತಿ ದಾಳಿ ನಡೆಸಿ ಯೋಧರನ್ನು ಸಾಯಿಸಿದ್ದಾನೆ ಎಂದು ಪೊಲೀಸರು ನಮ್ಮ ಮನೆಗೆ ಬಂದು ಹೇಳಿದರು. ನಾನು ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ ಕಾಶ್ಮೀರ ವಿವಾದವನ್ನು ಬಗೆಹರಿಸದಿದ್ದರೆ ಭವಿಷ್ಯದಲ್ಲಿ ಇಂತಹ ಅನೇಕ ಉಗ್ರಗಾಮಿಗಳ ದಾಳಿ ನಡೆಯಬಹುದು ಎಂದರು.

ಬೇರೆ ಯುವಕರು ನಿಮ್ಮ ಮಗನ ದಾರಿ ಹಿಡಿಯಬೇಕೆ ಎಂದು ಕೇಳಿದಾಗ, ನಾನು ಅನಕ್ಷರಸ್ಥ, ನನಗೆ ಹೆಚ್ಚು ಗೊತ್ತಿಲ್ಲ. ಯುವಕರು ಈ ದಾರಿಯಲ್ಲಿ ಹೋಗಬಾರದು, ಈ ಬಗ್ಗೆ ಸರ್ಕಾರ ಯೋಚಿಸಬೇಕು ಎಂದರು. ಮಗ ಉಗ್ರಗಾಮಿ ಚಟುವಟಿಕೆಯ ಅಡ್ಡದಾರಿ ಹುಡುಕಿದ್ದೇಕೆ ಎಂದು ಕೇಳಿದರೆ, ಪರಿಸ್ಥಿತಿ ಯುವಕರನ್ನು ಈ ದಾರಿಗೆ ಎಳೆಯುತ್ತದೆ. ನನ್ನ ಮಗ ಕಡಿಮೆ ಓದಿದವನು, ಆದರೆ ಮನ್ನನ್ ವಾನಿಯಂತಹ ಪಿ ಎಚ್ ಡಿ ಓದಿದವರು ಕೂಡ ಉಗ್ರಗಾಮಿಯಾಗುತ್ತಾರೆ. ಕಾಶ್ಮೀರ ಸಮಸ್ಯೆಯೇ ಇದಕ್ಕೆ ಮೂಲ ಕಾರಣ ಎಂದರು.

ಗಾಂದಿಬಾಗ್ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಆದಿಲ್ ಮನೆಗೆ ಭೇಟಿ ನೀಡಿ ಕಂಬನಿ ಮಿಡಿಯುತ್ತಿದ್ದಾರೆ. ಆದಿಲ್ ಮನೆಯಲ್ಲಿ ನಿನ್ನೆ ಬೆಳಗ್ಗೆ ಶುಕ್ರವಾರದ ಪಾರ್ಥನೆ ಬಳಿಕ ಅಂತ್ಯಕ್ರಿಯೆಯ ಪ್ರಾರ್ಥನೆ ಹಾಗೂ ಕೆಲವು ವಿಧಿವಿಧಾನಗಳನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ನೆರವೇರಿಸಿದರು. ಅಲ್ಲಿ ನೆರದಿದ್ದವರು ಭಾರತ ವಿರೋಧಿ ಮತ್ತು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com