ಯುಪಿಎಗಿಂತ ಶೇ.9ರಷ್ಟು ಅಗ್ಗದ ದರಕ್ಕೆ ರಫೇಲ್ ಒಪ್ಪಂದ ಕುದುರಿಸಿದ್ದೇವೆ: ಜೇಟ್ಲಿ

ರಫೇಲ್ ವಿವಾದ ಕುರಿತಂತೆ ರಾಹುಲ್ ಗಾಂಧಿಯವರ ಆರೋಪಕ್ಕೆ ತಿರುಗೇಟು ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರು...
ವಿತ್ತ ಸಚಿವ ಅರುಣ್ ಜೇಟ್ಲಿ
ವಿತ್ತ ಸಚಿವ ಅರುಣ್ ಜೇಟ್ಲಿ
ನವದೆಹಲಿ: ರಫೇಲ್ ವಿವಾದ ಕುರಿತಂತೆ ರಾಹುಲ್ ಗಾಂಧಿಯವರ ಆರೋಪಕ್ಕೆ ತಿರುಗೇಟು ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರು ಯುಪಿಎ ಸರ್ಕಾರಕ್ಕಿಂತಲೂ ಶೇ.9 ರಷ್ಟು ಅಗ್ಗದ ದರಕ್ಕೆ ರಫೇಲ್ ಒಪ್ಪಂದವನ್ನು ಎನ್'ಡಿಎ ಸರ್ಕಾರ ಕುದುರಿಸಿತ್ತು ಎಂದು ಬುಧವಾರ ಹೇಳಿದ್ದಾರೆ. 
ಲೋಕಸಭೆಯಲ್ಲಿ ರಾಹುಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ರಫೇಲ್ ಒಪ್ಪಂದ ಕುರಿತು ಸುಪ್ರೀಂಕೋರ್ಟ್ ಈಗಾಗಲೇ ಎಲ್ಲವನ್ನೂ ಹೇಳಿದೆ. ಎಲ್ಲಾ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ನ್ಯಾಯಾಲಯ ಈ ಬಗ್ಗೆ ಸ್ಪಷ್ಟ ತೀರ್ಪು ನೀಡಿದೆ. ಕಾಂಗ್ರೆಸ್ ಮಾಡಿದ್ದ ಎಲ್ಲಾ ಆರೋಪಗಳನ್ನು ಸರ್ವೋಚ್ಛ ನ್ಯಾಯಾಲಯ ತಳ್ಳಿ ಹಾಕಿದೆ. ರಫೇಲ್ ಒಪ್ಪಂದ ಕುರಿತು ಸಂಸದೀಯ ಜಂಟಿ ಸಮಿತಿ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಆಡಿಯೋ ಕ್ಲಿಪ್ ಮೂಲಕ ಕಾಂಗ್ರೆಸ್ ಸುಳ್ಳು ಹೇಳಲು ಹೊರಡಿದೆ. ಆಡಿಯೋ ಕ್ಲಿಪ್ ಗಳನ್ನು ಈಗಾಗಲೇ ಪರಿಕ್ಕರ್ ಹಾಗೂ ಗೋವಾ ಆರೋಗ್ಯ ಸಚಿವ ರಾಣೆಯವರು ತಳ್ಳಿ ಹಾಕಿದ್ದಾರೆ. ಆಡಿಯೋ ಕ್ಲಿಪ್ ಮಾನ್ಯತೆಯನ್ನು ಪಡೆದಿಲ್ಲ. ಈ ವಿಚಾರ ಸಣ್ಣ ಮಕ್ಕಳಿಗೂ ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ ಜ್ಞಾನವೂ ಇಲ್ಲ. ರಾಷ್ಟ್ರೀಯ ಭದ್ರತೆ, ಒಪ್ಪಂದ, ಅದರ ನೀತಿಗಳ ಬಗ್ಗೆ ಅದಕ್ಕೆ ಜ್ಞಾನವಿಲ್ಲ. ದೇಶದ ಸುರಕ್ಷತೆ ದೃಷ್ಟಿಯಿಂದ ಬೆಲೆಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಬೋಪೋರ್ಸ್ ಹಗರಣ, ಅಗಸ್ಟ್ ವೆಸ್ಟ್ ಲ್ಯಾಂಡ್ ವಿಚಾರವಾಗಿ ಡೈರಿ ಬರೆದಿದ್ದರು. ಬ್ಯಾಂಕ್ ಖಾತೆ ಕೂಡ ಬಹಿರಂಗಗೊಂಡಿತ್ತು. ಕಾಂಗ್ರೆಸ್ ಪಕ್ಷಕ್ಕೆ ಗಣಿತವೇ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. 
ರಾಹುಲ್ ಮೊದಲ ಪದದಿಂದ ಇಲ್ಲಿಯವರೆಗೂ ಹೇಳಿದ್ದು ಶುದ್ಧ ಸುಳ್ಳು. ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ನಾನು ಒಬ್ಬ ದೊಡ್ಡ ರಾಜಕಾರಣಿ ಎಂದು ತೋರಿಸಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಇದೇ ರೀತಿ ನಮ್ಮ ಕಡೆ ಸಾಕ್ಷಿ ಇದೆ. ಆಡಿಯೋ ಟೇಪ್ ಇದೆ. ದಾಖಲೆಗಳಿವೆ ಎಂದು ಸುಪ್ರೀಂಕೋರ್ಟ್ ಮುಂದೆನೂ ಸುಳ್ಳು ಹೇಳಿದ್ದರು. 

ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯವರಿಗೆ ಆಡಿಯೋ ಕ್ಲಿಪ್ ಪ್ಲೇ ಮಾಡಲು ನಿಂತು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಡಿಯೋ ಕ್ಲಿಪ್ ಕುರಿತ ದೃಢೀಕರಣದ ಬಗ್ಗೆ ರಾಹುಲ್ ಅವರಿಗೇ ಸಂಶಯವಿದೆ. ಏಕೆಂದರೆ ಆಡಿಯೋ ಕ್ಲಿಪ್'ನ್ನು ತಮ್ಮ ಪಕ್ಷದವರೇ ಸೃಷ್ಟಿಸಿರುವುದರಿಂದ ರಾಹುಲ್ ಅವರಿಗೆ ಭಯವಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆಡಿಯೋ ಕ್ಲಿಪ್'ಗೆ ಪ್ಲೇ ಮಾಡಲು ಬಿಡಬಾರದು. ಯಾವುದೇ ಆಧಾರಗಳನ್ನು ಪ್ರದರ್ಶಿಸುವ ವೇಳೆ ಅವುಗಳಿಗೆ ಕೆಲ ಪ್ರಕ್ರಿಯೆಗಳಿವೆ. ಆಡಿಯೋ ಕ್ಲಿಪ್ ಪ್ರಾಮಾಣೀಕೃತವಾಗಿರಬೇಕು. ಕೆಲವರು ಸತ್ಯವನ್ನು ಇಷ್ಟ ಪಡುವುದಿಲ್ಲ. ರಾಹುಲ್ ದನಿಯೆತ್ತಿರುವುದರ ಸಂಬಂಧ ಇಡೀ ದೇಶ ಅಸಮಾಧಾನಗೊಂಡಿದೆ. ದೊಡ್ಡ ದೊಡ್ಡ ವ್ಯಕ್ತಿಗಳಿಂದ ತಲೆಎತ್ತಿ ನಿಂತಿದ್ದ ಕಾಂಗ್ರೆಸ್'ನ್ನು ಇದೀಗ ವಿಮಾನಗಳ ಬಗ್ಗೆ ಜ್ಞಾನವೇ ಇಲ್ಲದ ವ್ಯಕ್ತಿಯೊಬ್ಬರು ಮುನ್ನಡೆಸುವಂತಾಗಿದೆ. ಕಾಂಗ್ರೆಸ್ ಕೇವಲ ಹಣವಷ್ಟೇ ಅರ್ಥಾಗುತ್ತದೆ. ದೇಶದ ಭದ್ರತೆ ವಿಚಾರ ಅರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com