ಲಖನೌ: ದೇವಾಲಯದಲ್ಲಿ ಊಟ ವಿತರಣೆ ಮಾಡುವಾಗ ಅದರಲ್ಲಿ ಮದ್ಯದ ಬಾಟಲ್ ಕೂಡ ಹಂಚಿಕೆ ಮಾಡಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಾರ್ದೋಯಿಯ ಶ್ರವಣ ದೇವಿ ದೇವಾಲಯದಲ್ಲಿ ಊಟ ವಿತರಣೆ ಮಾಡಬೇಕಾದರೆ ಬಿಜೆಪಿ ಶಾಸಕ ನಿತಿನ್ ಅಗರ್ವಾಲ್ ಊಟದ ಬಾಕ್ಸ್ ನಲ್ಲಿ ಮದ್ಯದ ಬಾಟಲ್ ಹಂಚಿದ್ದಾರೆ.
ಸ್ಥಳೀಯ ಪಾಸಿ ಸಮುದಾಯಕ್ಕೆ ಈ ಮದ್ಯದ ಬಾಟಲ್ ಗಳನ್ನು ಹಂಚಿದ್ದು ಬಿಜೆಪಿ ಶಾಸಕನ ನಡೆ ಈಗ ವಿವಾದಕ್ಕೆ ಗುರಿಯಾಗಿದೆ. ಎಸ್ ಪಿಯಿಂದ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಿತಿನ್ ಅಗರ್ವಾಲ್ ಅವರ ತಂದೆ ನರೇಶ್ ಅಗರ್ವಾಲ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಕ್ಷೇತ್ರದ ಬಿಜೆಪಿ ಸಂಸದ ಅನ್ ಶೂಲ್ ವರ್ಮಾ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇವಾಲಯದಲ್ಲಿ ಮದ್ಯದ ಬಾಟಲ್ ಗಳನ್ನು ಹಂಚಿರುವುದು ದುರದೃಷ್ಟಕರ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತ ಮಾಹಿತಿಯನ್ನು ಪಕ್ಷದ ವರಿಷ್ಠರಿಗೆ ತಲುಪಿಸಲಾಗುವುದು ಎಂದೂ ತಿಳಿಸಿದ್ದಾರೆ.
ದೇವಾಲಯದಲ್ಲಿ ಮದ್ಯದ ಬಾಟಲ್ ಗಳನ್ನು ಹಂಚಿರುವ ದೃಶ್ಯಾವಳಿಗಳನ್ನು ಎನ್ ಡಿಟಿವಿ ಪ್ರಕಟಿಸಿದ್ದು, ಧಾರ್ಮಿಕ ಕೇಂದ್ರದಲ್ಲಿ ಮದ್ಯದ ಬಾಟಲ್ ಹಂಚಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.