ಸಂಗ್ರಹ ಚಿತ್ರ
ದೇಶ
ಕಾಶ್ಮೀರದಲ್ಲಿ ಮತ್ತೆ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ ಸೇನೆ, ಇಂಟರ್ನೆಟ್ ಸೇವೆ ಸ್ಥಗಿತ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾರಿ ವಿಧ್ವಂಸಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಉಗ್ರರರನ್ನು ಭಾರತೀಯ ಸೇನೆಯ ಸೈನಿಕರು ಹೊಡೆದುರುಳಿಸಿದ್ದಾರೆ.
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾರಿ ವಿಧ್ವಂಸಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಉಗ್ರರರನ್ನು ಭಾರತೀಯ ಸೇನೆಯ ಸೈನಿಕರು ಹೊಡೆದುರುಳಿಸಿದ್ದಾರೆ.
ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಯರಿಪೋರಾ ಪ್ರಾಂತ್ಯದ ಕಟಾಪೋರಾ ಗ್ರಾಮದಲ್ಲಿ ಉಗ್ರರು ಅವಿತಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನಾಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಅವಿತಿರುವ ಉಗ್ರರ ಪೈಕಿ ಇಬ್ಬರನ್ನು ಹೊಡೆದುರುಳಿಸಿದ್ದಾರೆ. ಘಟನಾ ಪ್ರದೇಶದಲ್ಲಿ ಸುಮಾರು 4 ರಿಂದ 6 ಉಗ್ರರು ಅವಿತಿರುವ ಕುರಿತು ಮಾಹಿತಿ ಕೇಳಿಬಂದಿದ್ದು, ಈ ಪೈಕಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಉಗ್ರರು ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಅತ್ತ ಉಗ್ರರ ಅಡಗುತಾಣಕ್ಕೆ ಸೈನಿಕರು ದಾಳಿ ಮಾಡುತ್ತಿದ್ದಂತೆಯೇ ಇತ್ತ ಉಗ್ರರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪರಸ್ಪರ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರು ಹತರಾಗಿ ಬಾಕಿ ಉಗ್ರರು ಪರಾರಿಯಾಗಿದ್ದಾರೆ. ಸಾವನ್ನಪ್ಪಿದ ಉಗ್ರರ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಉಗ್ರರ ಹತ್ತಿಕ್ಕಲು ಯತ್ನಿಸಿದ ಸೇನೆ, ಕಲ್ಲು ತೂರಾಟದ ಸ್ವಾಗತ
ಇನ್ನು ಕಟಾಪೋರಾದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸೇನೆ ಆಗಮಿಸುತ್ತಿದ್ದಂತೆಯೇ ಇಲ್ಲಿನ ಉಗ್ರ ಪೋಷಿತ ಸ್ಥಳೀಯರು ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕಾರ್ಯಾಚರಣೆಗೆ ತೆರಳುತ್ತಿದ್ದ ಸೈನಿಕರಿಗೆ ತೊಡಕುಂಟಾಯಿತಾದರೂ, ಸರ್ವಸನ್ನದ್ಧವಾಗಿ ಆಗಮಿಸಿದ್ದ ಸೇನೆ, ಕಲ್ಲು ತೂರಾಟಗಾರರ ಮೇಲೆ ಅಶ್ರುವಾಯು, ರಬ್ಬರ್ ಬುಲೆಟ್ ಗಳ ಮೂಲಕ ದಾಳಿ ಮಾಡಿ ಪ್ರತಿಭಟನಾಕಾರರನ್ನು ಚದುರಿಸವಲ್ಲಿ ಯಶಸ್ವಿಯಾಗಿದ್ದಾರೆ. ಕುಲ್ಗಾಮ್ ಮಾತ್ರವಲ್ಲದೇ ಅವಳಿ ನಗರ ಅನಂತ್ ನಾಗ್ ನಲ್ಲೂ ಇದೀಗ ಕಲ್ಲು ತೂರಾಟ ಪ್ರಕರಣಗಳು ಕೇಳಿ ಬಂದಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಟರ್ನೆಟ್ ಸೇವೆ ಸ್ಥಗಿತ
ಇನ್ನು ಮುಂಜಾಗ್ರತಾ ಕ್ರಮವಾಗಿ ಅವಳಿ ನಗರಗಳಾದ ಅನಂತ್ ನಾಗ್ ಮತ್ತು ಕುಲ್ಗಾಮ್ ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.


