ಲಖನೌ: ಉತ್ತರ ಪ್ರದೇಶದ ಎಲ್ಲಾ 80 ಲೋಕಸಭೆ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಭಾನುವಾರ ಲಖನೌನ ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ಆಜಾದ್ "ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಾ 80 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.ಇದೀಗ ಚಳಿಗಾಲದ ಅಧಿವೇಶನ ಕೊನೆಗೊಂಡಿದೆ, 2019 ಚುನಾವಣೆ ಸಿದ್ಧತೆಗಳು ಪ್ರಾರಂಭವಾಗಿದೆ" ಎಂದಿದ್ದಾರೆ.
2019ರ ಚುನಾವಣೆಗೆ ಬಿಜೆಪಿ ವಿರೋಧಿ ಪಕ್ಷಗಳನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ ಎಂದ ಆಜಾದ್ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಸಂಭವಿಸಲಿದೆ ಎಂದಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಏಳ್ಗೆಯನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಬಿಜೆಪಿಯಂತೆ ಕಾಂಗ್ರೆಸ್ ಎಂದಿಗೂ ಸುಳ್ಳು ಭರವಸೆ ನೀಡುವುದಿಲ್ಲ.ಕಾಂಗ್ರೆಸ್ ಎಲ್ಲಾ ಧರ್ಮದವರನ್ನು ಸಮಾನರೆಂದು ಕಾಣುತ್ತದೆ.ಕಾಂಗ್ರೆಸ್ ಭಾರತ ಸ್ವಾತಂತ್ರ ಸಂಗ್ರಾಮದಲ್ಲಿದ್ದ ಕಾರಣಕ್ಕೆ ಇಂದು ನಾವು ಸ್ವತಂತ್ರರಾಗಿದ್ದೇವೆ. ನಮ್ಮ ಪಕ್ಷ ದೇಶಕ್ಕೆ ಪ್ರಥಮ ಪ್ರಧಾನಿಯನ್ನು ನೀಡಿದೆ ಎಂದು ಆಜಾದ್ ಹೇಳಿದ್ದಾರೆ.
ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ರಚಿಸಿಕೊಂಡಿರುವ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಕಾಂಗ್ರೆಸ್ ನ ಮಹತ್ವದ ಸ್ಥಾನಗಳಾದ ರಾಯ್ ಬರೇಲಿ ಹಾಗೂ ಅಮೇಥಿಗಳಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಸ್ಪಷ್ತಪಡಿಸಿಲ್ಲ.
ಇದಕ್ಕೆ ಮುನ್ನ ಶುಕ್ರವಾರ ದುಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2019ರ ಚುನಾವಣೆಯಲ್ಲಿತನ್ನ ಪಕ್ಷ ಪೂರ್ಣ ಶಕ್ತಿಯೊಂದಿಗೆ ಹೋರಾಡಲಿದೆ. ಉತ್ತರ ಪ್ರದೇಶ ಸೇರಿ ದೇಶಾದ್ಯಂತ ಎಲ್ಲಾ ಕಡೆ ಕಾಂಗ್ರೆಸ್ ಸ್ಪರ್ಧಿಸಲಿದೆ.ಉತ್ತರ ಪ್ರದೇಶದಲ್ಲಿ ಒಟ್ಟು 13 ರ್ಯಾಲಿಗಳಲ್ಲಿ ತಾವು ಭಾಗವಹಿಸುವುದಾಗಿ ಹೇಳಿದ್ದರು.