ಅಲೋಕ್ ವರ್ಮಾರ ಮೇಲಿನ ಭಯದಿಂದ ಸಿಬಿಐ ನಿರ್ದೇಶಕ ಸ್ಥಾನದಿಂದ ಮೋದಿ ವಜಾ ಮಾಡಿದ್ದಾರೆ : ಹರೀಶ್ ರಾವತ್

ಪ್ರಧಾನಿ ನರೇಂದ್ರ ಮೋದಿಯವರು ಭೀತಿಯಿಂದ ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ...
ಹರೀಶ್ ರಾವತ್
ಹರೀಶ್ ರಾವತ್

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿಯವರು ಭೀತಿಯಿಂದ ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ತೆಗೆದುಹಾಕಿದ್ದಾರೆ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಟೀಕಿಸಿದ್ದಾರೆ.

ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಒಂದಂತೂ ಸತ್ಯ ಪ್ರಧಾನಿ ಮೋದಿಯವರು ಭೀತಿಯಿಂದ ಆಘಾತಕ್ಕೊಳಗಾಗಿ ಅಲೋಕ್ ವರ್ಮಾ ಅವರನ್ನು ಹೇಗಾದರೂ ಮಾಡಿ ಸಿಬಿಐ ನಿರ್ದೇಶಕ ಸ್ಥಾನದಿಂದ ತೆಗೆಯಬೇಕೆಂದು ನಿರ್ಧಾರ ಕೈಗೊಂಡರು ಎಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಜಾಗೃತ ದಳದ ವರದಿ ಪಕ್ಷಪಾತೀಯವಾಗಿದ್ದು ಅದರ ಆಧಾರದ ಮೇಲೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ. ಕೇಂದ್ರ ಜಾಗೃತ ಆಯೋಗದ ವಿಶ್ವಾಸಾರ್ಹತೆ ಮತ್ತು ನಿಲುವನ್ನು ಕೇಂದ್ರ ಸರ್ಕಾರ ರಕ್ಷಿಸಬೇಕಿತ್ತು ಎಂದು ಕೂಡ ಅಭಿಪ್ರಾಯಪಟ್ಟರು.

ಮಹಾಘಟಬಂಧನ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ಟೀಕಿಸಿದ ರಾವತ್, ಬೇಜವಾಬ್ದಾರಿತನದ ಹೇಳಿಕೆಗೆ ಅಮಿತ್ ಶಾ ಪ್ರಖ್ಯಾತರು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸಲು ಮಹಾಘಟಬಂಧನ ಏರ್ಪಡುತ್ತಿದೆ ಎಂದರು.

ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ನೈತಿಕ ಉತ್ತೇಜನ ಸಿಗುತ್ತದೆ. ಮೈತ್ರಿ ಅವೆರಡೂ ಪಕ್ಷಗಳ ಆಂತರಿಕ ನಿರ್ಧಾರ. ಲೋಕಸಭೆ ಚುನಾವಣೆಗೆ ಮುನ್ನ ಸಾಕಷ್ಟು ವಿಷಯಗಳು ಬದಲಾಗಲಿವೆ. 2009ರ ಲೋಕಸಭೆ ಚುನಾವಣೆಯ ರೀತಿ ಇದು ಕಾಂಗ್ರೆಸ್ ಗೆ ಗೆಲುವು ತಂದುಕೊಡಲಿದೆ. ಉತ್ತರ ಪ್ರದೇಶದ ಜನತೆ ಮೈತ್ರಿಗಳಿಂದ ನೊಂದು ಹೋಗಿದ್ದಾರೆ ಎಂದರು.

ಇದಕ್ಕೂ ಮುನ್ನ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವುದು ಸರ್ಕಾರದ ತಪ್ಪು ನಿರ್ಧಾರ, ಇದು ತನಿಖಾ ಸಂಸ್ಥೆಯನ್ನು ನಾಶಪಡಿಸುವ ಯತ್ನ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com