ಬಾರ್ ಕೌನ್ಸಿಲ್ ವಿರೋಧದ ನಡುವೆಯೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಮಹೇಶ್ವರಿ, ಖನ್ನಾಗೆ ಭಡ್ತಿ

ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಿರೋಧದ ನಡುವೆಯೂ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬುಧವಾರ ಆಯ್ಕೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಿರೋಧದ ನಡುವೆಯೂ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬುಧವಾರ ಆಯ್ಕೆ ಮಾಡಲಾಗಿದೆ.
ಪ್ರಸ್ತುತ ದಿನೇಶ್ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದು, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸಂಜೀವ್ ಖನ್ನಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಈ ಇಬ್ಬರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಆಯ್ಕೆ ಮಾಡುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ​ನ ಪಂಚ ಸದಸ್ಯರ ಕೊಲೀಜಿಯಂ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಜನವರಿ 11ರಂದು ಸುಪ್ರೀಂ ಕೋರ್ಟ್ ​ನ ಪಂಚ ಸದಸ್ಯರ ಕೊಲೀಜಿಯಂ ಈ ಇಬ್ಬರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಆಯ್ಕೆ ಮಾಡುವಂತೆ ಶಿಫಾರಸ್ಸು ಮಾಡಿತ್ತು.
ನ್ಯಾಯಮೂರ್ತಿಗಳ ಭಡ್ತಿಗೆ ರಾಷ್ಟ್ರಪತಿಗಳ ಅಂಕಿತ
ಇನ್ನು ಅತ್ತ ಸುಪ್ರೀಂ ಕೋರ್ಟ್ ನ ಕೊಲೀಜಿಂಯ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಿರೋಧ
ಇನ್ನು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಆಯ್ಕೆ ಮಾಡುವಂತೆ ಶಿಫಾರಸ್ಸು ಮಾಡಿರುವ ಸುಪ್ರೀಂ ಕೋರ್ಟ್ ನ ಕೊಲೀಜಿಯಂ ನಿರ್ಧಾರ ಸರಿಯಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ. ಈ ಬಗ್ಗೆ ಇಂದು ಬೆಳಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ದೆಹಲಿಯಲ್ಲಿ ತೀವ್ರ ಪ್ರತಿಭಟನೆ ಕೂಡ ಮಾಡಿದ್ದರು. ಅಂತೆಯೇ ಕೊಲೀಜಿಯಂ ನಿರ್ಧಾರವನ್ನು ವಿಚಿತ್ರ ಮತ್ತು ಅನಿಯಂತ್ರಿತ ಎಂದು ಟೀಕಿಸಿದ್ದರು.
ಅಲ್ಲದೆ ಕೊಲೀಜಿಯಂ ನ ಸದಸ್ಯರಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ, ನ್ಯಾ,ಎಕೆ ಸಿಕ್ರಿ, ಎಸ್ ಎ ಬಾಬ್ಡೇ, ಎನ್ ವಿ ರಮಣ ಮತ್ತು ಅರುಣ್ ಮಿಶ್ರಾ ಅವರು ನ್ಯಾಯಮೂರ್ತಿಗಳ ಹಿರಿತನವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದೆ. ದೆಹಲಿ, ರಾಜಸ್ಥಾನ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಪ್ರದೀಪ್ ನಂದರಾಜೋಗ್ ಮತ್ತು ರಾಜೇಂದ್ರ ಮೆನನ್ ಅವರ ಹಿರಿತನವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com