'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ.56ರಷ್ಟು ಹಣ ಜಾಹಿರಾತಿಗೇ ಖರ್ಚು!

ದೇಶದಲ್ಲಿ ನಿರ್ಭಯಾ ದಂತಹ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ 4 ವರ್ಷಗಳ ಹಿಂದೆ ಜಾರಿಗೆ ತಂದಿದ್ದ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ.56ರಷ್ಟು ಹಣ ಜಾಹಿರಾತಿಗಾಗಿಯೇ ಖರ್ಚಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ನಿರ್ಭಯಾ ದಂತಹ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ 4 ವರ್ಷಗಳ ಹಿಂದೆ ಜಾರಿಗೆ ತಂದಿದ್ದ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ.56ರಷ್ಟು ಹಣ ಜಾಹಿರಾತಿಗಾಗಿಯೇ ಖರ್ಚಾಗಿದೆ ಎಂದು ತಿಳಿದುಬಂದಿದೆ.
ಹೌದು.. ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ. 56ರಷ್ಟು ಹಣ ಯೋಜನೆಯ ಜಾಹಿರಾತುಗಳಿಗಾಗಿಯೇ ಖರ್ಚಾಗಿದೆಯಂತೆ. ಇದರಲ್ಲಿ ಮಾಧ್ಯಮ ಜಾಹಿರಾತು, ಸುದ್ದಿ ಪತ್ರಿಕೆಗಳಲ್ಲಿನ ಜಾಹಿರಾತು, ಬ್ಯಾನರ್ ಗಳು ಸೇರಿದಂತೆ ಯೋಜನೆ ನಿಮಿತ್ತ ಆಯೋಜನೆಯಾಗಿದ್ದ ಕಾರ್ಯಕ್ರಮಗಳ ವೆಚ್ಚವೂ ಇದರಲ್ಲಿ ಸೇರಿದೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಾನವ ಸಂಪನ್ಮೂಲ ಇಲಾಖೆಗಳು ನೀಡಿರುವ ದತ್ತಾಂಶಗಳಿಂದ ಈ ಮಾಹಿತಿ ತಿಳಿದುಬಂದಿದೆ.
2014-15 ರಿಂದ 2018-19ರವೆರಗೂ ಯೋಜನೆಗಾಗಿ ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಒಟ್ಟಾರೆ ಹಣದ ಪೈಕಿ ಶೇ.56ರಷ್ಟು ಹಣ ಜಾಹಿರಾತುಗಳಿಗೆ ಖರ್ಚಾಗಿದ್ದು, ಶೇ.25ಕ್ಕಿಂತಲೂ ಕಡಿಮೆ ಹಣ ಯೋಜನೆಯ ಫಲಾನುಭವಿಗಳಿಗೆ ಸಂದಿದೆ. ಅಂತೆಯೇ ಶೇ.19ಕ್ಕಿಂತಲೂ ಕಡಿಮೆ ಹಣ ಇನ್ನೂ ಬಾಕಿ ಉಳಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೆಣ್ಣು ಭ್ರೂಣ ಹತ್ಯೆ ತಡೆ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಂತಹ ಮಹತ್ವದ ಉದ್ದೇಶದಿಂದ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com