ಮಲಪ್ಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ತನ್ನ ಅತ್ತೆಯಿಂದಲೇ ಹಲ್ಲೆಗೀಡಾಗಿ ಸುದ್ದಿಯಾಗಿದ್ದ ಕೇರಳದ ಕನಕದುರ್ಗಳನ್ನು ಇದೀಗಿ ಮನೆಯಿಂದ ಹೊರಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದೀಗ ಅವರು ಪೆರಿಂತಲ್ಮನ್ನದಲ್ಲಿ ಸರ್ಕಾರ ನಡೆಸುತ್ತಿರುವ ಆಶ್ರಯ ಮನೆಯಲ್ಲಿ ಮಹಿಳಾ ಕಾರ್ಯಕರ್ತರು ಅವರಿಗೆ ಆಶ್ರಯ ಕಲ್ಪಿಸಿದ್ದಾರೆ.
ಅತ್ತ ಪತಿಯ ಮನೆಯಿಂದ ಹೊರಹಾಕಲ್ಪಟ್ಟ ಕನಕದುರ್ಗಗೆ ಇತ್ತ ತನ್ನ ಅಣ್ಣ ಭರತ್ ಕೂಡ ಆಶ್ರಯ ನೀಡಲಿಲ್ಲ. ತನ್ನ ಮನೆಗೆ ಕಾಲಿಡದಂತೆ ಅಣ್ಣ ಕೂಡ ತಾಕೀತು ಮಾಡಿದ್ದಾರೆ. ಆಕೆ ನನ್ನ ಮನೆಗೆ ಕಾಲಿಡಬೇಕಾದರೆ ಹಿಂದೂ ಭಕ್ತಾದಿಗಳು ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕ್ಷಮೆ ಕೇಳಬೇಕೆಂದು ಭರತ್ ಆಗ್ರಹಿಸಿದ್ದಾರೆ.
ಹಲ್ಲೆಗೀಡಾಗಿ ಕೋಚಿಕ್ಕೋಡಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆದ ನಂತರ ಪೆರಿಂತಲ್ಮನ್ನ ಪೊಲೀಸ್ ಠಾಣೆಗೆ ಹೋದರು. ಅತ್ತೆಯಿಂದ ಏಟು ತಿಂದು ಕನಕದುರ್ಗ ಕಳೆದ ಜನವರಿ 15ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಕಿವಿ ಮತ್ತು ತಲೆಗೆ ತೀವ್ರ ಏಟಾಗಿತ್ತು. ಪೊಲೀಸರು ಆಕೆಯನ್ನು ಪಕ್ಕದ ಆಶ್ರಯ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಕನಕದುರ್ಗಗೆ ಸಾಕಷ್ಟು ಭದ್ರತೆ ನೀಡಲಾಗಿದ್ದು ಸುತ್ತಮುತ್ತ ಸುಮಾರು 10 ಮಂದಿ ಪೊಲೀಸರ ತಂಡ ನಿಯೋಜನೆಯಾಗಿದೆ ಎಂದು ಪೆರಿಂತಲ್ಮನ್ನ ಸರ್ಕಲ್ ಇನ್ಸ್ ಪೆಕ್ಟರ್ ಟಿ ಎಸ್ ಬಿನು ತಿಳಿಸಿದ್ದಾರೆ.
ಕನಕದುರ್ಗಾ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ್ದನ್ನು ವಿರೋಧಿಸಿ ಆಕೆಯ ಅತ್ತೆ ಹಲ್ಲೆ ಮಾಡಿದ್ದರು. ಆಕೆಯ ಸೋದರ ಭರತ್ ಭೂಷಣ್ ಕೂಡ ವಿರೋಧಿಸಿದ್ದರು. ಜನವರಿ ಮೊದಲ ವಾರದಲ್ಲಿ ಕನಕದುರ್ಗ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ಪೊಲೀಸರ ಭದ್ರತೆಯಲ್ಲಿ ಅಯ್ಯಪ್ಪನ ದೇವಾಲಯವನ್ನು ಪ್ರವೇಶಿಸಿದ್ದರು.
Advertisement