ಮಧ್ಯ ಪ್ರದೇಶ: ಕಾಂಗ್ರೆಸ್ ಸರ್ಕಾರದ ಪರ ಮತ ಚಲಾಯಿಸಿದ ಇಬ್ಬರು ಬಿಜೆಪಿ ಶಾಸಕರು

ವರಿಷ್ಠರು ಸೂಚನೆ ನೀಡಿದರೆ ಕೇವಲ 24 ಗಂಟೆಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಧ್ಯ ಪ್ರದೇಶ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹೇಳಿಕೆ...
ಕಮಲ್ ನಾಥ್
ಕಮಲ್ ನಾಥ್
ಭೋಪಾಲ್: ವರಿಷ್ಠರು ಸೂಚನೆ ನೀಡಿದರೆ ಕೇವಲ 24 ಗಂಟೆಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಧ್ಯ ಪ್ರದೇಶ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಬಿಜೆಪಿ ಶಾಸಕರು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪರ ಮತ ಚಲಾಯಿಸುವ ಮೂಲಕ ಕೇಸರಿ ಪಡೆಗೆ ಶಾಕ್ ನೀಡಿದ್ದಾರೆ.
ಆಪರೇಷನ್ ಕಮಲದ ಪರಿಣಾಮ ಕರ್ನಾಟಕದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಮಧ್ಯಪ್ರದೇಶದ ಪ್ರತಿಪಕ್ಷ ನಾಯಕ ಗೋಪಾಲ್​ ಭಾರ್ಗವ ಅವರು, ಕಮಲ್​ನಾಥ್​ ನೇತೃತ್ವದ ಸರ್ಕಾರ 7 ತಿಂಗಳಿಂದ ಆಡಳಿತದಲ್ಲಿದೆ. ಅವರು ಆಡಳಿತ ನಡೆಸಿದ್ದು ಇನ್ನು ಸಾಕು. ಪಕ್ಷದ ನಂ. 1 ಅಥವಾ ನಂ. 2 ಅವರಿಂದ ಆದೇಶ ಬಂದರೆ 24 ಗಂಟೆಯೊಳಗೆ ನಿಮ್ಮ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಪ್ರತಿಪಕ್ಷ ನಾಯಕ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಮಧ್ಯ ಪ್ರದೇಶ ಸರ್ಕಾರ ಅಪರಾಧ ಕಾನೂನು ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮತಕ್ಕೆ ಹಾಕಿತು. ಈ ವೇಳೆ ಬಿಜೆಪಿಯ ಇಬ್ಬರು ಶಾಸಕರು ನಮ್ಮ ಸರ್ಕಾರದ ಪರ ಮತ ಹಾಕಿದ್ದಾರೆ ಎಂದು ಕಮಲ್ ನಾಥ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕ ಗೋಪಾಲ್​ ಭಾರ್ಗವ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ನಾಥ್ ಅವರು, ಬಿಜೆಪಿ ಕನಸು ನನಸಾಗುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್​ ಶಾಸಕರು ಮಾರಾಟಕ್ಕೆ ಇಲ್ಲ. ಬಿಜೆಪಿ ಬಯಸಿದಾಗ ನಾವು ವಿಶ್ವಾಸಮತ ಸಾಬೀತು ಪಡಿಸಲು ಸಿದ್ಧರಿದ್ದೇವೆ ಎಂದರು.
ಮಧ್ಯಪ್ರದೇಶದಲ್ಲಿ 231 ಸಂಖ್ಯಾಬಲವಿದ್ದು, ಬಿಎಸ್​ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯ ಬಲದೊಂದಿಗೆ ಕಾಂಗ್ರೆಸ್​ ನೇತೃತ್ವದ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್​ ಪಕ್ಷ 114 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 108 ಶಾಸಕರನ್ನು ಹೊಂದಿದೆ. ಸರಳ ಬಹುಮತಕ್ಕೆ 116 ಶಾಸಕರ ಅಗತ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com