ಬುಲಂದರಷಹರ್: ಸ್ವಚ್ಚ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಯದ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರಗಳ ಚಿತ್ರವಿರುವ ಟೈಲ್ಸ್ ಕಂಡುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿ ಗ್ರಾಮೀಣಾಭಿವೃದ್ಧಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಇಖ್ವಾರಿ ಗ್ರಾಮದ ಮುಖ್ಯಸ್ಥರಿಗೆ ಸಹ ನೋಟೀಸ್ ನೀಡಲಾಗಿದೆ.
ಶೌಚಾಲಯದ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.ಗ್ರಾಮಸ್ಥರು ಹೇಳುವಂತೆ ಗ್ರಾಮದ ಮುಖ್ಯಸ್ಥನ ಸೂಚನೆಯಂತೆ ಶೌಚಾಲಯಕ್ಕೆ ಈ ಟೈಲ್ಸ್ ಗಳನ್ನು ಬಳಸಲಾಗಿತ್ತು.
"ನಾವು ಅದರ ವಿರುದ್ಧ ದೂರು ನೀಡಿದಾಗ, ಉನ್ನತಾಧಿಕಾರಿಗಳ ತೀರ್ಮಾನದಂತೆಇದನ್ನು ನಿರ್ಮಿಸಲಾಗಿದೆ. ನಾವು ಇದರಲ್ಲಿ ಮಧ್ಯೆ ಪ್ರವೇಶಿಸಬಾರದೆಂದು ನಮಗೆ ತಿಳಿಸಲಾಗಿತ್ತು. ಆದರೆ ಶೌಚಾಲಯದ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ "ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಬಳಿಕ ಗ್ರಾಮೀಣಾಭಿವೃದ್ಧಿಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಅಮಾನತ್ತುಗೊಳಿಸಲಾಗಿದ್ದು ಗ್ರಾಮದ ಮುಖ್ಯಸ್ಥೆ ಸಾವಿತ್ರಿ ದೇವಿಗೆ ನೋಟೀಸ್ ನೀಡಲಾಗಿದೆ.
ಗ್ರಾಮದಲ್ಲಿ ನಿರ್ಮಿಸಿದ 13 ಶೌಚಾಲಯಗಳ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರವಿರುವ ಟೈಲ್ಸ್ ಗಳನ್ನು ಬಳಸಲಾಗಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಈ ಗ್ರಾಮದಲ್ಲಿ 508 ಶೌಚಾಲಯಗಳನ್ನು ಸ್ವಚ್ಚ ಬಾರತ್ ಅಭಿಯಾನದಡಿ ನಿರ್ಮಾಣ ಮಾಡಲಾಗಿದೆ.