ಪ.ಬಂಗಾಳದಲ್ಲಿ ವೈದ್ಯರ ಮುಷ್ಕರ: ಪ್ರತಿಷ್ಠೆ ಬೇಡ ಎಂದ ಕೇಂದ್ರ, ಜಗ್ಗದ ದೀದಿ, 120 ವೈದ್ಯರಿಂದ ರಾಜೀನಾಮೆ

ಪಶ್ಚಿಮ ಬಂಗಾಳದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರ ಶುಕ್ರವಾರ ತೀವ್ರ ಸ್ಪರೂಪ ಪಡೆದುಕೊಂಡಿದ್ದು,...
ವೈದ್ಯರ ಪ್ರತಿಭಟನೆ
ವೈದ್ಯರ ಪ್ರತಿಭಟನೆ
Updated on
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರ ಶುಕ್ರವಾರ ತೀವ್ರ ಸ್ಪರೂಪ ಪಡೆದುಕೊಂಡಿದ್ದು, ಕಿರಿಯ, ಹಿರಿಯ ವೈದ್ಯರು ಹಾಗೂ ಪ್ರಾಧ್ಯಾಪಕರು ಸೇರಿದಂತೆ 120ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿದ್ದಾರೆ.
ವೈದ್ಯರ ಸಾಮೂಹಿಕ ಮುಷ್ಕರ ಹಾಗೂ ರಾಜೀನಾಮೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಮಧ್ಯ ಪ್ರವೇಶದಿಂದಲೂ ತೃಪ್ತರಾಗದ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ.
ಇಂದು ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಸೇರಿದಂತೆ ಪಶ್ಚಿಮ ಬಂಗಾಳ ವಿವಿಧೆಡೆಯಿಂದ ಸುಮಾರು 120 ವೈದ್ಯರು ತಮ್ಮ ಸೇವೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಈ ವರೆಗೂ ನಾವು ನಮ್ಮ ಶಕ್ತಿ ಮೀರಿ ಸೇವೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಕಾರ್ಯ ಚಟುವಟಿಕೆಗಳ ಮೇಲೆ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಿದ್ದೆವು, ಆದರೆ ಪ್ರಸ್ತುತ ಪರಿಸ್ಥಿತಿ ತೀವ್ರಗೊಂಡಿದ್ದು, ನಾವು ನಮ್ಮ ಕರ್ತವ್ಯ ಮುಂದುವರೆಸುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ನಾವು ನಮ್ಮ ಸೇವೆಗೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಬುಧವಾರ ಎಸ್ಎಸ್ ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ್ದ ಪಶ್ಚಿಮ ಮಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಷ್ಕರ ಹಿಂಪಡೆಯದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಜಗ್ಗದ ವೈದ್ಯರು ತಮಗೆ 'ರಕ್ಷಣೆ ಮತ್ತು ನ್ಯಾಯ' ಒದಗಿಸುವ ವರೆಗೂ ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಘೋಷಿಸಿದ್ದಾರೆ.
ಈ ಮಧ್ಯೆ ವೈದ್ಯರ ಮುಷ್ಕರವನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಳ್ಳಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದ್ದಾರೆ. 
'ಇದನ್ನು ಪ್ರತಿಷ್ಠೆಯ ವಿಷಯವಾಗಿ ಮಾಡಿಕೊಳ್ಳಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದರೂ ವೈದ್ಯರು ತಮಗೆ ಸೂಕ್ತ ರಕ್ಷಣೆ ಕೊಡಿ ಮತ್ತು ತಪ್ಪಿತಸ್ಥರನ್ನು ಕಾನೂನಿಗೆ ಅನುಗುಣವಾಗಿ ಶಿಕ್ಷಿಸಿ ಎಂದಷ್ಟೇ ಕೇಳಿಕೊಂಡಿದ್ದಾರೆ. ಆದರೆ ಬ್ಯಾನರ್ಜಿ ವೈದ್ಯರ ಕೋರಿಕೆ ಪರಿಗಣಿಸದೆ ಗಡುವು ವಿಧಿಸಿದ್ದಾರೆ. ಇದರಿಂದ ಕೆರಳಿದ ವೈದ್ಯ ಸಮುದಾಯ ದೇಶವ್ಯಾಪಿ ಮುಷ್ಕರಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ತಮ್ಮ ವರ್ತನೆಯನ್ನು ಬದಲಿಸಿಕೊಂಡರೆ ದೇಶಾದ್ಯಂತ ರೋಗಿಗಳು ತೊಂದರೆಗೀಡಾಗುವುದು ತಪ್ಪುತ್ತದೆ' ಎಂದು ಹರ್ಷವರ್ಧನ್ ಎಎನ್‌ಐಗೆ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿ ಎಂದು ದೀದಿ ಎಚ್ಚರಿಕೆ
ನಾಲ್ಕು ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾ ನಿರತ ವೈದ್ಯರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ನಿರತ ಕಿರಿಯ ವೈದ್ಯರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಭೇಟಿ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ವೈದ್ಯರು ನ್ಯಾಯ ಬೇಕು ಎಂದು ಘೋಷಣೆ ಕೂಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com