ಪ್ರಧಾನಿ ಮೋದಿ, ಅಜಿತ್ ದೊವಲ್ ಜೊತೆ ಮೈಕೆಲ್ ಪಾಂಪಿಯೊ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ - ಪ್ರಧಾನಿ ನರೇಂದ್ರ ಮೋದಿಯವರ ದ್ವಿಪಕ್ಷೀಯ ಭೇಟಿಗೆ ಕೆಲವೇ ಕೆಲವು ದಿನಗಳ ಮುನ್ನ, ಅಮೆರಿಕದ ವಿದೇಶಾಂಗ...
ಮೈಕೆಲ್ ಆರ್ ಪಾಂಪಿಯೊ - ನರೇಂದ್ರ ಮೋದಿ
ಮೈಕೆಲ್ ಆರ್ ಪಾಂಪಿಯೊ - ನರೇಂದ್ರ ಮೋದಿ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ - ಪ್ರಧಾನಿ ನರೇಂದ್ರ ಮೋದಿಯವರ ದ್ವಿಪಕ್ಷೀಯ ಭೇಟಿಗೆ ಕೆಲವೇ ಕೆಲವು ದಿನಗಳ ಮುನ್ನ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್ ಪಾಂಪಿಯೊ ಅವರು ಬುಧವಾರ ದೆಹಲಿಯಲ್ಲಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ತಮ್ಮ ನಿರ್ಣಾಯಕ ರಾಜತಾಂತ್ರಿಕ ಸಂಧಾನ ಆರಂಭಿಸಿದ್ದಾರೆ.
ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವುದರ ಜೊತೆಗೆ ಭಾರತ -ಅಮೆರಿಕ ನಡುವಿನ ಬಾಂಧವ್ಯದ ವಿವಿಧ ವಿಷಯಗಳ ಬಗ್ಗೆ ವಿನಿಮಯ ಮಾಡಿಕೊಳ್ಳಲು ಪಾಂಪಿಯೊ ಕರೆ ನೀಡಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದೇ 28ರಿಂದ ಜಪಾನಿನ ಒಸಾಕಾದಲ್ಲಿ ನಡೆಯಲಿರುವ ಜಿ 20 ಶೃಂಗಸಭೆ ಹೊರತಾಗಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಭೇಟಿ, ಮಾತುಕತೆಗೆ ಬೇಕಿರುವ ವೇದಿಕೆ ಸಿದ್ಧತೆಗಾಗಿ ಪಾಂಪಿಯೊ ಭಾರತಕ್ಕೆ ಆಗಮಿಸಿದ್ದಾರೆ.
ಪಾಂಪಿಯೊ ಅವರು ಇಂದು ಸೌತ್ ಬ್ಲಾಕ್ ಗೆ ಆಗಮಿಸಿದ ಸಮಯದಲ್ಲಿ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಅಧಿಕಾರ ಹಿಡಿದ ನಂತರ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಅಮೆರಿಕ ಸಂಬಂಧಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಿರುವ ಸಮಯದಲ್ಲಿ ಈ ಭೇಟಿಯು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯಕ್ಕೆ ಸಹಕಾರಿಯಾಗಲಿದೆ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಭಾರತ ಮತ್ತ ಅಮೆರಿಕ ನಡುವಿನ ಬಾಂಧವ್ಯ ಎಂದೂ ಮುರಿಯಲಾಗದು ಎಂದು ಅಮೆರಿಕ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಭಾರತ- ಅಮೆರಿಕ ಪರಸ್ಪರರ ಮೌಲ್ಯಗಳು, ಸಂಪ್ರದಾಯ ಮತ್ತು ಆಳವಾದ ಬಾಂಧವ್ಯ ಹಾಗೂ ಗೌರವವನ್ನು ಕಾಪಾಡಿಕೊಂಡಿವೆ. ನಮ್ಮ ಜನರು ಮತ್ತು ಸಂಸ್ಕೃತಿಗಳು ಭಾರತದ ಜೊತೆ ಗಾಢವಾಗಿ ಬೆಸೆದುಕೊಂಡಿದೆ ಎಂದು ಅಮೆರಿಕ ಸರ್ಕಾರ ಹೇಳಿದೆ.
ಪಾಂಪಿಯೊ ಅವರು ವಿದೇಶಾಂಗ ಸಚಿವ ಡಾ.ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ.
ಭಯೋತ್ಪಾದನೆ ನಿಗ್ರಹ, ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳು, ಇರಾನ್- ಅಮೆರಿಕ ಸಂಘರ್ಷ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮಸ್ಯೆಗಳು, ಹೆಚ್ ಒನ್ ವೀಸಾ, ಇಂಡೋ ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳು ಪ್ರಮುಖವಾಗಿ ಚರ್ಚೆಯಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com