ಅಭಿನಂದನ್ ಹಸ್ತಾಂತರ ಪ್ರಕ್ರಿಯೆ
ಅಭಿನಂದನ್ ಹಸ್ತಾಂತರ ಪ್ರಕ್ರಿಯೆ

ಅಭಿನಂದನ್‌ ಹಸ್ತಾಂತರ; ಬಿಡುಗಡೆ ವಿರೋಧಿಸಿ ಪಿಐಎಲ್, 4 ಗಂಟೆ ವಿಳಂಬ

ಪಾಕಿಸ್ತಾನ ವಶದಲ್ಲಿದ್ದ ಭಾರತೀಯ ವಾಯುಸೇನೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಬಿಡುಗಡೆಯಾಗುವ ಕೊನೆಯ ಕ್ಷಣದವರೆಗೂ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುವ ಮೂಲಕ ಪಾಕಿಸ್ತಾನ ತನ್ನ ನರಿ ಬುದ್ಧಿ ಪ್ರದರ್ಶಿಸಿದೆ.
Published on
ಅಟಾರಿ: ಪಾಕಿಸ್ತಾನ ವಶದಲ್ಲಿದ್ದ ಭಾರತೀಯ ವಾಯುಸೇನೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಬಿಡುಗಡೆಯಾಗುವ ಕೊನೆಯ ಕ್ಷಣದವರೆಗೂ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡಿದೆ.
ಪಾಕಿಸ್ತಾನ ಸಂಸತ್ ನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತೀಯ ಪೈಲಟ್ ಅಭಿನಂದನ್ ರನ್ನು ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಿದ್ದರೂ, ಇತ್ತ ಪಾಕಿಸ್ತಾನದ ಆಂತರಿಕ ಸಚಿವಾಲಯವಾಗಲೀ ಅಥವಾ ರಕ್ಷಣಾ ಇಲಾಖೆಯಾಗಲಿ ಈ ಕುರಿತೂ ಯಾವುದೇ ರೀತಿಯ ಪ್ರಕ್ರಿಯೆಗಳನ್ನೂ ಆರಂಭಿಸಿರಲಿಲ್ಲ. ಬಹುಶಃ ಪಾಕಿಸ್ತಾನದ ಅಧಿಕಾರಿಗಳಿಗೂ ತಾವೇ ನೀಡಿದ ಮಾತಿನ ಮೇಲೆ ತಮಗೇ ಭರವಸೆ ಇಲ್ಲ ಎಂದು ಕಾಣುತ್ತದೆ. ಇದೇ ಕಾರಣಕ್ಕೆ ಹಸ್ತಾಂತರ ಪ್ರಕ್ರಿಯನ್ನು ಆರಂಭವೇ ಮಾಡಿರಲಿಲ್ಲ.
ಇದರ ನಡುವೆಯೇ ಪಾಕಿಸ್ತಾನ ಸುಪ್ರೀಂ ಕೋರ್ಟ್ ನಲ್ಲಿ ಅಭಿನಂದನ್ ಬಿಡುಗಡೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು.
ಅಟಾರಿ-ವಾಘಾ ಗಡಿಯಲ್ಲಿ ಪ್ರತಿದಿನ ಸಂಜೆ ನಡೆಯಲಿರುವ ಉಭಯ ದೇಶಗಳ ಸೈನಿಕರ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮಕ್ಕೂ ಮೊದಲೇ ಅಭಿನಂದನ್ ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಕೇಳಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಪಾಕಿಸ್ತಾನ ಕಾರ್ಯಕ್ರಮದ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆಸುವುದಾಗಿ ಹೇಳಿತ್ತು. ಆದರೆ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮವೇ ರದ್ದಾಗಿತ್ತು. ಸಂಜೆ 5 ಗಂಟೆ ಬಳಿಕ ಹಸ್ತಾಂತರ ಮಾಡುವುದಾಗಿ ಹೇಳಿದ್ದ ಪಾಕ್, ಬಳಿಕ ರಾತ್ರಿ 9 ಗಂಟೆಗೆ ಹಸ್ತಾಂತರ ಪ್ರಕ್ರಿಯೆ ಮುಂದೂಡಿತ್ತು. ಆ ಮೂಲಕ ಹಸ್ತಾಂತರ ಪ್ರಕ್ರಿಯೆಯನ್ನು ಬರೊಬ್ಬರಿ 4 ಗಂಟೆ ತಡ ಮಾಡಿತು.
ಭಾರತದ ಕಡೆಯಿಂದ ಎಲ್ಲಾ ರೀತಿಯಲ್ಲಿ ಕಾಗದ ಪತ್ರಗಳ ಕೆಲಸ ಸೇರಿ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾದರೂ, ಲಾಹೋರ್ ನಲ್ಲಿ ಅಭಿನಂದನ್ ರನ್ನು ತಡೆದು ಕೆಲ ಕಾಗದ ಪತ್ರಗಳ ಕೆಲಸಗಳನ್ನು ಪಾಕ್‌ ತಡ ಮಾಡಿದೆ ಎಂದು ತಿಳಿದು ಬಂದಿದೆ. ಪಾಕ್‌ ಸರ್ಕಾರಕ್ಕೆ ಐಎಸ್‌ಐ ಒತ್ತಡ ಹಾಕಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.  ಕಸ್ಟಮ್ಸ್‌ ಮತ್ತು ವಲಸೆ ವಿಭಾಗದ ಕೆಲ ಪ್ರಕ್ರಿಯೆಗಳಲ್ಲಿ ಪಾಕ್‌ ಉದ್ದೇಶ ಪೂರ್ವಕವಾಗಿ ವಿಳಂಬ ತೋರಿದೆ ಎಂದು ವರದಿಯಾಗಿದೆ.   ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಅಭಿನಂದನ್ ಪೋಷಕರು ಕೂಡಾ ಗಡಿಯಲ್ಲಿ  ಹಾಜರಿದ್ದು ಮಗನ ಬರುವಿಕೆಗಾಗಿ ಕಾಯುತ್ತಿದ್ದರು.  ಗಡಿಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು, ಮೂರು ಸೇನಾ ಮುಖ್ಯಸ್ಥರಿಗೆ ಝಡ್‌ ಪ್ಲಸ್‌ ಭದ್ರತೆ ಒದಗಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com