ಕುಪ್ವಾರ ಎನ್ ಕೌಂಟರ್: ಸೇನೆ ಗುಂಡಿಗೆ ಇಬ್ಬರು ಉಗ್ರರು ಹತ; ಭದ್ರತಾ ಪಡೆಯ 5 ಸಿಬ್ಬಂದಿ ಹುತಾತ್ಮ, ಓರ್ವ ನಾಗರಿಕ ಸಾವು

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತು ಸೇನಾಪಡೆಗಳ ನಡುವೆ ಭೀಕರ ಎನ್ ಕೌಂಟರ್ ನಡೆಯುತ್ತಿದೆ.
ಸೇನಾ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಸೇನಾ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಶ್ರೀನಗರ: ಇಡೀ ದೇಶ ಭಾರತೀಯ ಸೇನೆಯ ವಿಂಡ್ ಕಮಾಂಡರ್ ಅಭಿನಂದನ್ ಸ್ವಾಗತಕ್ಕೆ ಕಾತರದಿಂದ ಕಾಯುತ್ತಿರುವಂತೆಯೇ ಅತ್ತ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತು ಸೇನಾಪಡೆಗಳ ನಡುವೆ ಭೀಕರ ಎನ್ ಕೌಂಟರ್ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಸೇನಾಪಡೆಗಳ ಗುಂಡಿಗೆ ಇಬ್ಬರು ಉಗ್ರರು ಹತರಾಗಿದ್ದು,  ಓರ್ವ ನಾಗರಿಕ ಹಾಗೂ ಭದ್ರತಾ ಪಡೆಯ 5 ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿರುವ ಬದಾಗುಂದ್​ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ. ಬದಾಗುಂದ್​ ಹಳ್ಳಿಯಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ಮಾಹಿತಿ ನೀಡಿತ್ತು. ಕೂಡಲೇ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಈ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಕಾಳಗದಲ್ಲಿ ಭಾರತಿಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ ಎನ್ನಲಾಗಿದೆ. ದಾಳಿ ಸಮಯದಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ಧಾರೆ ಎಂದು ತಿಳಿದು ಬಂದಿದೆ. ಕೆಲ ಗಂಟೆಗಳ ಕಾಲ ಶಾಂತವಾಗಿದ್ದ ಪ್ರದೇಶದಲ್ಲಿ ಮತ್ತೆ ಗುಂಡಿನ ದಾಳಿ ಶುರುವಾಗಿದೆ. ಪುನಃ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆಯುತ್ತಿದೆ. ದಾಳಿ ಬಳಿಕ ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸತ್ತಿದ್ದಾನೆ ಎಂದು ಹೇಳಲಾಗಿದ್ದ ಉಗ್ರನಿಂದಲೇ ನಾಲ್ಕು ಸೇನಾಧಿಕಾರಿಗಳ ಹತ್ಯೆ
ಇನ್ನು ಈ ಹಿಂದೆ ಸೇನಾ ಕಾರ್ಯಾಚರಣೆಯಲ್ಲಿ ಸತ್ತಿದ್ದಾನೆ ಎಂದು ಹೇಳಲಾಗಿದ್ದ ಉಗ್ರಗಾಮಿಯೇ ಇಂದಿನ ಗುಂಡಿನ ಕಾಳಗದಲ್ಲಿ ಸೇನಾಧಿಕಾರಿಗಳ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸೇನಾ ಮೂಲಗಳ  ಪ್ರಕಾರ ಕಾರ್ಯಾಚರಣೆಯಲ್ಲಿ ಓರ್ವ ಸಿಆರ್ ಪಿಎಫ್ ಇನ್ಸ್ ಪೆಕ್ಟರ್, ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿ, ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕುಪ್ವಾರದ ಲ್ಯಾಂಗೇಟ್ ಕ್ರಾಲ್ ಗುಂಡ್ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com