ಹಂದ್ವಾರ; 3ನೇ ದಿನಕ್ಕೆ ಕಾಲಿಟ್ಟ ಎನ್ ಕೌಂಟರ್, ಓರ್ವ ಉಗ್ರ ಹತ, ಸ್ಥಳೀಯರ ಪ್ರತಿಭಟನೆಯಿಂದಾಗಿ ಕಾರ್ಯಾಚರಣೆ ವಿಳಂಬ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ಕಳೆದ ಶುಕ್ರವಾರ ರಾತ್ರಿ ಆರಂಭವಾಗಿದ್ದ ಗುಂಡಿನ ಕಾಳಗ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ರಾತ್ರಿ ಓರ್ವ ಉಗ್ರಗಾಮಿಯನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ.
ಹಂದ್ವಾರ ಎನ್ಕೌಂಟರ್
ಹಂದ್ವಾರ ಎನ್ಕೌಂಟರ್
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ಕಳೆದ ಶುಕ್ರವಾರ ರಾತ್ರಿ ಆರಂಭವಾಗಿದ್ದ ಗುಂಡಿನ ಕಾಳಗ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ರಾತ್ರಿ ಓರ್ವ ಉಗ್ರಗಾಮಿಯನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ.
ಹಂದ್ವಾರದ ಬಾಬಾಗುಂಡ್ ಗ್ರಾಮದಲ್ಲಿನ ಮೂರು ಮನೆಗಳಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಕಾಶ್ಮೀರ ಪೊಲೀಸರು ಹಾಗೂ ಸಿಆರ್ ಪಿಎಫ್ ಯೋಧರು ಮನೆಗಳನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದು, ಕಳೆದ 60 ಗಂಟೆಗಳಲ್ಲಿ ಉಗ್ರರ ಗುಂಡಿಗೆ ಇಬ್ಬರು ಸಿಆರ್ ಪಿಎಫ್ ಯೋಧರು, ಇಬ್ಬರು ಕಾಶ್ಮೀರ ಪೊಲೀಸರು ಹುತಾತ್ಮರಾಗಿದ್ದಾರೆ.
ಅಂತೆಯೇ ಕಳೆದ ರಾತ್ರಿ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ. ಇನ್ನು ಉಗ್ರರು ಅಡಗಿದ್ದ ಮನೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಮನೆಗಳು ಭಾಗಶಃ ಹಾನಿಯಾಗಿದೆ. ಅಲ್ಲದೆ ಮನೆ ಧ್ವಂಸವಾಗಿದ್ದು ಉಗ್ರನ ಶವ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭವಾಗಿದೆ.
ಅಂತೆಯೇ ಘಟನಾ ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಕಾರ್ಯಾಚರಣೆ ತಡವಾಗಿದೆ. ಮನೆಗಳ ಧ್ವಂಸವನ್ನು ವಿರೋಧಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com