ಗುರಿಗಳ ಮೇಲೆ ದಾಳಿ ಮಾಡುವುದಷ್ಟೇ ನಮ್ಮ ಕೆಲಸ, ಶವಗಳ ಎಣಿಸುವುದಲ್ಲ: ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ

ಯೋಜನೆಯಂತೆ ಗುರಿಗಳ ಮೇಲೆ ದಾಳಿ ಮಾಡುವುದಷ್ಟೇ ನಮ್ಮ ಕೆಲಸವಾಗಿತ್ತು. ಆದರೆ ಅಲ್ಲಿ ಸಂಭವಿಸಿದ ಸಾವು-ನೋವುಗಳ...
ಸುದ್ದಿಗೋಷ್ಠಿಯಲ್ಲಿ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ
ಸುದ್ದಿಗೋಷ್ಠಿಯಲ್ಲಿ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ
Updated on
ನವದೆಹಲಿ: ಯೋಜನೆಯಂತೆ ಗುರಿಗಳ ಮೇಲೆ ದಾಳಿ ಮಾಡುವುದಷ್ಟೇ ನಮ್ಮ ಕೆಲಸವಾಗಿತ್ತು. ಆದರೆ ಅಲ್ಲಿ ಸಂಭವಿಸಿದ ಸಾವು-ನೋವುಗಳ ಲೆಕ್ಕಾಚಾರ ನಮ್ಮ ಕೆಲಸವಲ್ಲ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಖಾರವಾಗಿ ಹೇಳಿದ್ದಾರೆ.
ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ನಲ್ಲಿದ್ದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್ ಗಳ ಮೇಲೆ ವಾಯುಸೇನೆ ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದಗಳ ಕುರಿತು ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾಯುಸೇನೆ ದಾಳಿ ಸಂಬಂಧ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆಯ ವಾಯುಸೇನೆ ಸಾಮರ್ಥ್ಯದ ಬಗ್ಗೆ ಶಂಕೆ ಬೇಡ. ವಾಯುಸೇನೆ ಸಮರ್ಥವಾಗಿದ್ದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಉಗ್ರ ಕ್ಯಾಂಪ್ ಗಳ ಮೇಲಿನ ದಾಳಿ ಕುರಿತು ಮಾತನಾಡಿದ ಧನೋವಾ ಅವರು, ಪೂರ್ವ ಯೋಜನೆಯಂತೆ ನಾನು ನಿಗದಿ ಪಡಿಸಿದ್ದ ಗುರಿಗಳ ಮೇಲೆ ನಾವು ದಾಳಿ ಮಾಡಿದ್ದೇವೆ. ಆದರೆ ಅಲ್ಲಿ ಸಂಭವಿಸಿರಬಹುದಾದ ಸಾವುನೋವುಗಳ ಕುರಿತ ಲೆಕ್ಕಾಚಾರವನ್ನು ನಾವು ಮಾಡಿಲ್ಲ. ಅದೇನಿದ್ದರೂ ಅಲ್ಲಿನ ಸರ್ಕಾರದ ಕೆಲಸವಷ್ಟೇ.. ಸಾವುನೋವಿನ ಕುರಿತು ಸ್ಪಷ್ಟನೆ ನೀಡುವ ಜವಾಬ್ದಾರಿ ನಮ್ಮದಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ವಾಯುದಾಳಿಯ ಸತ್ಯಾಸತ್ಯತೆಗಳ ಕುರಿತು ಎದ್ದಿರುವ ಪ್ರಶ್ನೆಗಳ ಕುರಿತು ಮಾತನಾಡಿದ ಅವರು, ನಾವೇನಿದ್ದರೂ ಎಷ್ಟು ಗುರಿಗಳ ಮೇಲೆ ದಾಳಿ ಮಾಡಬೇಕು ಎಂಬುದನ್ನು ಮಾತ್ರ ಆಲೋಚಿಸಿ ದಾಳಿ ಮಾಡಿದ್ದೇವೆ. ದಾಳಿ ವೇಳೆ ಸಂಭವಿಸಿದ ಸಾವುನೋವುಗಳ ಕುರಿತು ನಾವು ಲೆಕ್ಕಾಚಾರ ಮಾಡಿಲ್ಲ, ಆ ಕೆಲಸವೂ ನಮ್ಮದಲ್ಲ. ಪೂರ್ವ ಯೋಜನೆಯಂತೆ ನಿಗದಿತ ಗುರಿಗಳ ಮೇಲೆ ದಾಳಿ ಮಾಡಿದ್ದೇವೆ. ಒಂದು ವೇಳೆ ನಾವು ದಾಳಿ ಮಾಡಿರದೇ ಹೋದರೆ ಪಾಕಿಸ್ತಾನದ ಪ್ರಧಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನಾವು ಒಂದು ವೇಳೆ ಅರಣ್ಯದ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ದರೆ ಅವರೇಕೆ ಇಷ್ಟು ಗಂಭೀರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರೂ ಕೂಡ ವಾಯುಗಡಿ ಉಲ್ಲಂಘಿಸುವ ಪ್ರಯತ್ನವನ್ನೇಕೆ ಮಾಡಿದರು ಎಂದು ಪ್ರಶ್ನಿಸಿದರು. 
ಇನ್ನು ಪಾಕ್ ವಶದಲ್ಲಿದ್ದು, ಇದೀಗ ಭಾರತಕ್ಕೆ ವಾಪಸ್ ಆಗಿರುವ ಪೈಲಟ್ ಅಭಿನಂದನ್ ಅವರ ಕುರಿತು ಮಾತನಾಡಿದ ಧನೋವಾ, ಅಭಿನಂದವ್ ಮತ್ತೆ ಕರ್ತವ್ಯಕ್ಕೆ ಹಾಜರಾಗುವುದು ಅಥವಾ ಬಿಡುವುದು ಅವರ ಆರೋಗ್ಯದ ಮೇಲೆ ಆಧಾರಿತವಾಗಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಖಂಡಿತಾ ಕರ್ತವ್ಯಕ್ಕೆ ವಾಪಸ್ ಆಗಲಿದ್ದಾರೆ. ಈ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು. ಮಿಗ್ 21 ಯುದ್ಧ ವಿಮಾನದ ಕುರಿತು ಮಾತನಾಡಿದ ಧನೋವಾ, ಮಿಗ್ 21ಜೆಟ್ ಯುದ್ಧ ವಿಮಾನ ಸಮರ್ಥವಾಗಿದೆ. ಯಾವುದೇ ಪರಿಸ್ಥಿತಿಗೂ ಹೊಂದಿಕೊಂಡು ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕಾಲಕಾಲಕ್ಕೆ ಮಿಗ್ 21 ಯುದ್ಧ ವಿಮಾನ ಅಪ್ ಗ್ರೇಡ್ ಮಾಡಲಾಗಿದ್ದು, ಉತ್ತಮ ರಾಡಾರ್ ವ್ಯವಸ್ಥೆ ಹಾಗೂ ಏರ್ ಟು ಏರ್ ಕ್ಷಿಪಣಿ ವ್ಯವಸ್ಥೆ ಮತ್ತು ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com