ಅಯೋಧ್ಯೆಯ ಭೂ ವಿವಾದ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ, ಸಂಧಾನವೊಂದೇ ಪರಿಹಾರ ಎಂದು ಸಲಹೆ

ಅಯೋಧ್ಯೆಯ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ​ನಲ್ಲಿ ಮಹತ್ವದ ವಿಚಾರಣೆ ಆರಂಭವಾಗಿದ್ದು, ತನ್ನ ತೀರ್ಪು ಕಾಯ್ದಿರಿಸಿರುವ ಸುಪ್ರೀಂ ಕೋರ್ಟ್ ಸಂಧಾನವೊಂದೇ ಪರಿಹಾರ ಎಂದು ಸಲಹೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ​ನಲ್ಲಿ ಮಹತ್ವದ ವಿಚಾರಣೆ ಆರಂಭವಾಗಿದ್ದು, ತನ್ನ ತೀರ್ಪು ಕಾಯ್ದಿರಿಸಿರುವ ಸುಪ್ರೀಂ ಕೋರ್ಟ್ ಸಂಧಾನವೊಂದೇ ಪರಿಹಾರ ಎಂದು ಸಲಹೆ ನೀಡಿದೆ. 
ದೇಶದ ಅತಿ ವಿವಾದಿತ ಪ್ರಕರಣವಾಗಿರುವ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಮಹತ್ವದ ನಿರ್ಣಯ ಇಂದು ಹೊರಬೀಳುವ ನಿರೀಕ್ಷೆ ಇದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಯನ್ನು ನೇಮಕ ಮಾಡುವ ಮೂಲಕ ಬಗೆಹರಿಸಿಕೊಳ್ಳುವಂತೆ ಶಿಫಾರಸು ಮಾಡುವ ಬಗ್ಗೆ ಮಾರ್ಚ್​ 6ರಂದು ಆದೇಶ ಹೊರಡಿಸುವುದಾಗಿ ಈ ಹಿಂದೆ ಸುಪ್ರೀಂಕೋರ್ಟ್ ಅಂದರೆ​ ಫೆಬ್ರವರಿ 26ರಂದು ಹೇಳಿತ್ತು. ಆ ಹಿನ್ನೆಲೆಯಲ್ಲಿ ಇಂದಿನ ನಿರ್ಣಯ ಕುತೂಹಲ ಮೂಡಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ನೇತೃತ್ವದ  ಪಂಚ ಸದಸ್ಯ ಸಾಂವಿಧಾನಿಕ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ದಶಕಗಳ ಹಿನ್ನೆಲೆಯಿರುವ ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಸಾಧ್ಯವಿದೆಯಾ ಎಂಬುದನ್ನು ನೋಡಬೇಕಾಗಿದೆ. ಒಂದುವೇಳೆ ಸಂಧಾನದಿಂದ ಈ ಪ್ರಕರಣವನ್ನು ಬಗೆಹರಿಸಲು ಶೇ. 1ರಷ್ಟು ಸಾಧ್ಯತೆಯಿದ್ದರೂ ರಾಜಕೀಯ ಪಕ್ಷಗಳು ಮಧ್ಯಸ್ಥಿಕೆಗೆ ಮುಂದಾಗಬೇಕು ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣ ಕೇವಲ ಜಾಗಕ್ಕೆ ಸಂಬಂಧಪಟ್ಟಿದ್ದಲ್ಲ. ಎರಡು ಧರ್ಮದ ಜನರ ಭಾವನೆಯ ನಡುವಿನ ಸಮಸ್ಯೆಯೂ ಇದಾಗಿದೆ. ಹಿಂದೆ ಏನಾಗಿತ್ತು, ಯಾವ ರಾಜ ಆಗಿದ್ದ, ಆತ ದೇವಸ್ಥಾನ ಕಟ್ಟಿಸಿದ್ದನೋ, ಮಸೀದಿ ಕಟ್ಟಿಸಿದ್ದನೋ ಎಂಬುದರ ಬಗ್ಗೆ ನಮಗೆ ನಿಯಂತ್ರಣವಿರಲಿಲ್ಲ. ಆಗಿದ್ದು ಆಗಿಹೋಗಿದೆ. ಆದರೆ, ಈಗ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ಯೋಚಿಸಬೇಕು. ಸಮಸ್ಯೆಯನ್ನು ಬಗೆಹರಿಸುವುದು ಹೇಗೆಂಬುದಷ್ಟೇ ನಮ್ಮ ಕಳಕಳಿ ಎಂದು ನ್ಯಾಯಪೀಠ ವಿಚಾರಣೆ ವೇಳೆ ಹೇಳಿದೆ.
ಅಂತೆಯೇ ರಾಜಕೀಯವಾಗಿಯೂ ಪ್ರಭಾವಿತವಾಗಿರುವ ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕವೇ ಬಗೆಹರಿಸಲು ಸಾಧ್ಯವಿದೆಯಾ ಎಂಬುದನ್ನೂ ಸುಪ್ರೀಂ ಕೋರ್ಟ್ ನಿರ್ಧಾರ ಮಾಡಲಿದೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಸುಪ್ರೀಂ ಕೋರ್ಟ್ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವ ಆಯ್ಕೆ ಮುಂದಿಟ್ಟಿತ್ತು.  ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ಮಧ್ಯಸ್ಥಿಕೆ ಮೂಲಕ ಈ ವಿವಾದವನ್ನು ಬಗೆಹರಿಸುವುದು ಉತ್ತಮ ಎಂದು ನ್ಯಾ. ಎಸ್​.ಎ. ಬೊಬ್ಡೆ ಅಭಿಪ್ರಾಯಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com