ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತವರಿನಲ್ಲೇ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ನಿಮ್ಮ ಮತವೇ ನಿಮ್ಮ ಅಸ್ತ್ರವಾಗಿದ್ದು, ಅದನ್ನು ಎಚ್ಚರಿಕೆಯಿಂದ ಬಳಸಿ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ಗಾಂಧಿನಗರದಲ್ಲಿ ಕಾಂಗ್ರೆಸ್ ಜನ ಸಂಕಲ್ಪ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ನಿಮ್ಮ ಮತವೇ ನಿಮ್ಮ ಅಸ್ತ್ರ. ಆಲೋಚನೆ ಮಾಡಿ, ನಿರ್ಧರಿಸಿ ಮತ ಚಲಾಯಿಸಿ ಎಂದು ಕರೆ ನೀಡಿದರು.
ಈ ದೇಶ ಪ್ರೀತಿ, ಸಾಮಾರಸ್ಯ ಮತ್ತು ಸಹೋದರತ್ವದ ಅಡಿಪಾಯಗಳ ಮೇಲೆ ನಿರ್ಮಾಣವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಏನಾಗುತ್ತಿದೆ ಎಂಬುದು ದುಃಖದ ಸಂಗತಿ. ನಿಮ್ಮ ಮುಂದೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಭರವಸೆ ನೀಡಿದಂತೆ ಉದ್ಯೋಗ ಎಲ್ಲಿ? ಮಾತು ಕೊಟ್ಟಂತೆ 15 ಲಕ್ಷ ರುಪಾಯಿ ಎಲ್ಲಿ? ಮಹಿಳೆಯರ ಸುರಕ್ಷತೆ ಎಲ್ಲಿ? ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.
ಈ ಚುನಾವಣೆ ಏನು ಅನ್ನೋದನ್ನು ನೀವು ಸರಿಯಾಗಿ ಅಲೋಚಿಸಬೇಕು. ನೀವು ಈ ಚುನಾವಣೆಯಲ್ಲಿ ಏನನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ನಿಮ್ಮ ಭವಿಷ್ಯವನ್ನು ಆಯ್ದುಕೊಳ್ಳುತ್ತೀರಿ. ಅಪ್ರಯೋಜಕ ವಿಷಯಗಳನ್ನು ಎತ್ತಬಾರದು ಎಂದರು.
ದೇಶದ ಸಾಂವಿಧಾನಿ ಸಂಸ್ಥೆಗಳನ್ನು ನಾಶಮಾಡಲಾಗುತ್ತದೆ. ದೇಶದಲ್ಲಿ ದ್ವೇಷ ಹರಡುತ್ತಿದ್ದಾರೆ. ಇದನ್ನು ತಡೆಯಲು ಮತ್ತು ದೇಶವನ್ನು ರಕ್ಷಿಸಲು ನೀವು ಮತ್ತು ನಾವು ಒಟ್ಟಿಗೆ ಕಾರ್ಯೋನ್ಮುಖರಾಗುವುದು ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದು ಹೇಳಿದರು.