ಸೇನಾ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ, 10 ದಿನಗಳ ಅಂತರದಲ್ಲಿ 12 ಉಗ್ರ ಕ್ಯಾಂಪ್ ಗಳು ಧ್ವಂಸ!

ಮಯನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಮಯನ್ಮಾರ್ ಸೇನೆ ಜಂಟಿಯಾಗಿ ನಡೆಸಿರುವ ಉಗ್ರ ನಿಗ್ರಹ ಕಾರ್ಯಾಚರಣೆ, ಭಾರತೀಯ ಸೇನಾ ಇತಿಹಾಸದ ಅತೀ ದೊಡ್ಡ ಕಾರ್ಯಾಚರಣೆಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಯನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಮಯನ್ಮಾರ್ ಸೇನೆ ಜಂಟಿಯಾಗಿ ನಡೆಸಿರುವ ಉಗ್ರ ನಿಗ್ರಹ ಕಾರ್ಯಾಚರಣೆ, ಭಾರತೀಯ ಸೇನಾ ಇತಿಹಾಸದ ಅತೀ ದೊಡ್ಡ ಕಾರ್ಯಾಚರಣೆಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಇಂಡೋ-ಮಯನ್ಮಾರ್ ಸ್ನೇಹ ಸಂಬಂಧಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕಲಾಡನ್ ಯೋಜನೆ ರೂಪಿಸಿತ್ತು. ಅದರಂತೆ ಈ ಯೋಜನೆ ಅಡಿಯಲ್ಲಿ ಕೋಲ್ಕತ್ತಾದಿಂದ ಮಿಜೋರಾಂವರೆಗೂ ಉತ್ತಮ ಸಾರಿಗೆ, ಸಂಪರ್ಕ ಕಲ್ಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು. ಆ ಮೂಲಕ ಉಭಯ ದೇಶಗಳ ನಡುವಿ ವಾಣಿಜ್ಯ ವಹಿವಾಟು ಪ್ರಮಾಣ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ ಇದಕ್ಕೆ ಅಲ್ಲಿನ ಗಡಿಭಾಗದ ಅರಾಕನ್ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಯೋಜನೆಗೆ ಬೆದರಿಕೆ ಕೂಡ ಒಡ್ಡಿತ್ತು. 
ಆಂಗ್ಲ ಮಾಧ್ಯಮದ ವರದಿಯಲ್ಲಿರುವಂತೆ ಭಾರತದ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತೀಯ ಸೇನೆ ಈ ಕಾರ್ಯಾಚರಣೆಯನ್ನು ನಡೆಸಿದೆ. ಚೀನಾದ ಗಡಿ ಪ್ರದೇಶದಿಂದ ಭಾರತಕ್ಕೆ ನುಸುಳಲು ಉಗ್ರರು ಸ್ಕೆಚ್ ರೂಪಿಸಿದ್ದರು. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ಖಚಿತ ಲಭ್ಯವಾಗಿತ್ತು. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಾರ್ಯಾಚರಣೆ ರೂಪರೇಷೆ ರೂಪಿಸಿದ ಸೇನೆ ಫೆಬ್ರವರಿ 17ರಿಂದಲೇ ಕಾರ್ಚಾಯರಣೆಗೆ ಇಳಿಯಿತು.
ಭಾರತೀಯ ಈ ಸೇನೆಯ ಕಾರ್ಯಾಚರಣೆಗೆ ಮಯನ್ಮಾರ್ ಸೇನೆ ಕೂಡ ಕೈ ಜೋಡಿಸಿದ್ದು, ಕಾರ್ಯಾಚರಣೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಿತು. ಕಾರ್ಯಾಚರಣೆಯ ಮೊದಲ ಭಾಗವಾಗಿ ಮಿಜೋರಾಂ ಗಡಿ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಬಳಿಕ ನಾಗಾ ಉಗ್ರರ ಕೇಂದ್ರಗಳನ್ನುಕೂಡ ಧ್ವಂಸ ಮಾಡಲಾಗಿದೆ. ವರದಿಯಲ್ಲಿರುವಂತೆ ಅರುಣಾಚಲ ಪ್ರದೇಶದಿಂದ 1 ಸಾವಿರ ಕಿಮೀ ದೂರದಲ್ಲಿದ್ದ ಉಗ್ರರ ಕೇಂದ್ರಗಳನ್ನು ನಾಶ ಪಡಿಸಲಾಗಿದೆ. 2 ವಾರದ ಕಾಲ ನಡೆದ ಈ ಆಪರೇಷನ್ ಮಾರ್ಚ್ 2 ರಂದು ಅಂತ್ಯವಾಗಿದೆ. 
ಅರಾಕನ್ ಆರ್ಮಿ ಉತ್ತಮ ತರಬೇತಿ ಪಡೆದ ಉಗ್ರರ ಗುಂಪಾಗಿದ್ದು, ಸುಧಾರಿತ ಸ್ಫೋಟಕಗಳನ್ನು ಬಳಸಿ ಕೃತ್ಯ ನಡೆಸುತಿತ್ತು. ಈ ಉಗ್ರ ಸಂಘಟನೆ ಮ್ಯಾನ್ಮಾರ್, ಭಾರತದ ತಲೆನೋವಿಗೆ ಕಾರಣವಾಗಿತ್ತು. ಮ್ಯಾನ್ಮಾರ್ ಸರ್ಕಾರ ನೀಡಿದ್ದ ಮಾಹಿತಿ ಆಧಾರಿಸಿ ಭಾರತ ಉಗ್ರರನ್ನು ಹೊಡೆದುರಳಿಸಿದೆ. ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳು ನಾಶವಾಗಿರುವುದು ಖಚಿತವಾಗಿದೆ. ಭಾರತ ಸೇನೆಯ ವಿಶೇಷ ದಳಗಳು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ.
ಮ್ಯಾನ್ಯಾರ್ ಮತ್ತು ಚೀನಾದ ಗಡಿಯನ್ನು ಹೊಂದಿರುವ ಕಚೀನ್ ರಾಜ್ಯದಲ್ಲಿ ಅರಾಕನ್ ಅರ್ಮಿ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಚೀನಾ ಕೆಐಎ ಸಂಘಟನೆ ಕಳೆದ ಎರಡು ವರ್ಷಗಳಲ್ಲಿ 3000 ಅರಾಕನ್ ಉಗ್ರರಿಗೆ ತರಬೇತಿ ನೀಡಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಒಟ್ಟಾರೆ ಇಡೀ ದೇಶ ಬಾಲಾಕೋಟ್ ಏರ್ ಸ್ಟ್ರೈಕ್ ಕುರಿತು ತಲೆಕೆಡಿಸಿಕೊಂಡಿದ್ದರೆ ಅತ್ತ ಭಾರತ ಮತ್ತು ಮಯನ್ಮಾರ್ ಸೇನೆ ಸದ್ದೇ ಇಲ್ಲದೇ ಈಶಾನ್ಯ ಭಾರತದಲ್ಲಿ ಉಗ್ರ ನೆಲೆಗಳನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ವಾಪಸ್ ಬಂದಿವೆ. ಆದರೆ ಈ ಬಗ್ಗೆ ಭಾರತೀಯ ಸೇನೆಯಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಿ ಯಾವುದೇ ರೀತಿಯ ಸ್ಪಷ್ಟೀಕರಣ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com