ಸಂಗ್ರಹ ಚಿತ್ರ
ದೇಶ
ವಿಶ್ವ ರಂಗಭೂಮಿ ದಿನಾಚರಣೆ ಶುಭಾಶಯಗಳು; ಮಿಷನ್ ಶಕ್ತಿ ಕುರಿತು ಮೋದಿ ಕಾಲೆಳೆದ ರಾಹುಲ್ ಗಾಂಧಿ
ಬಾಹ್ಯಾಕಾಶದಲ್ಲೇ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಭಿನಂಧಿಸಿದ್ದು, ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯ ಹೇಳುವ ಮೂಲಕ ಮೋದಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ನವದೆಹಲಿ: ಬಾಹ್ಯಾಕಾಶದಲ್ಲೇ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಭಿನಂಧಿಸಿದ್ದು, ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯ ಹೇಳುವ ಮೂಲಕ ಮೋದಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹವೊಂದನ್ನು ಎ-ಸ್ಯಾಟ್ ಕ್ಷಿಪಣಿ ಬಳಕೆ ಮಾಡಿ ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳ ಅಭೂತಪೂರ್ವ ಸಾಧನೆಯನ್ನು ಮುಕ್ತಕಂಠದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ. ಟ್ವೀಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿಜ್ಞಾನಿಗಳ ಈ ಸಾಧನೆ ನಿಜಕ್ಕೂ ಅದ್ಬುತ. ಅವರ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಈ ವಿಚಾರವನ್ನು ತಾವೇ ಖುದ್ದು ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತೂ ವ್ಯಂಗ್ಯ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು ಎಂದು ಹೇಳಿ ವ್ಯಂಗ್ಯ ಮಾಡಿದ್ದಾರೆ. ಆ ಮೂಲಕ ಡಿಆರ್ ಡಿಒ ಮಾಡಬೇಕಿದ್ದ ಘೋಷಣೆಯನ್ನು ಪ್ರಧಾನಿ ಮೋದಿ ಮಾಡಿದ್ದೇಕೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಡಿಆರ್ ಡಿಒ, ಇಸ್ರೋ ವಿಜ್ಞಾನಿಗಳ ಅಭೂತಪೂರ್ವ ಸಾಧನೆಗೆ ಅಭಿನಂದನೆ: ಕಾಂಗ್ರೆಸ್
ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಮೂಲಕ ಬಾಹ್ಯಾಕಾಶದಲ್ಲೇ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ ಡಿಆರ್ ಡಿಒ ವಿಜ್ಞಾನಿಗಳಿಗೆ ಕಾಂಗ್ರೆಸ್ ಅಭಿನಂದನೆ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಧನೆ ಕುರಿತು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಮಾಹಿತಿ ನೀಡಿದ ಬೆನ್ನಲ್ಲೇ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಡಿಆರ್ ಡಿಒ, ಇಸ್ರೋ ವಿಜ್ಞಾನಿಗಳ ಅಭೂತಪೂರ್ವ ಸಾಧನೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದೆ.
ಅಂತೆಯೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒಗಳ ನಿರ್ಮಾಣದ ಕುರಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಕಾಂಗ್ರೆಸ್, 1962ರಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಇಂಡಿಯನ್ ಸ್ಪೇಸ್ ಪ್ರೋಗ್ರಾಮ್ ಅನ್ನು ಆರಂಭಿಸಿದ್ದರು. ಆ ಬಳಿಕ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾಗಾಂಧಿ ಅವರು ಇಸ್ರೋ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದರು. ಈ ಇಬ್ಬರು ಮಹಾನ್ ಸಾಧಕರ ಕಾರ್ಯದಿಂದಾಗಿ ಇಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ಪಡುವಂತಾಗಿದೆ. ಅಂತೆಯೇ 1958ರಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಡಿಆರ್ ಡಿಒ ಸ್ಥಾಪನೆ ಮಾಡಿದ್ದರು. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಡಿಆರ್ ಡಿಒದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ