ಸೂರತ್ ಕೋಚಿಂಗ್ ಸೆಂಟರ್ ಅಗ್ನಿ ಅವಘಡ
ಸೂರತ್ ಕೋಚಿಂಗ್ ಸೆಂಟರ್ ಅಗ್ನಿ ಅವಘಡ

ಸೂರತ್ ಕೋಚಿಂಗ್ ಸೆಂಟರ್ ಅಗ್ನಿ ಅವಘಡ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ತನಿಖೆ ಆರಂಭ

ಗುಜರಾತ್ ನ ಸೂರತ್ ನಲ್ಲಿ ನಡೆದ ಭೀಕರ ಕಟ್ಟಡ ಅಗ್ನಿ ಅಘಡದಲ್ಲಿ ಸಾವಿಗೀಡಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Published on
ಸೂರತ್: ಗುಜರಾತ್ ನ ಸೂರತ್ ನಲ್ಲಿ ನಡೆದ ಭೀಕರ ಕಟ್ಟಡ ಅಗ್ನಿ ಅಘಡದಲ್ಲಿ ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸೂರತ್ ಸಾರ್ತನ ಪ್ರದೇಶದ ತಕ್ಷಶಿಲಾ ಆರ್ಕೇಡ್ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ ನಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ ಘಟನೆಯಲ್ಲಿ ಈ ವರೆಗೂ ಸುಮಾರು 20 ಮಂದಿ ಸಾವಿಗೀಡಾಗಿದ್ದು, ಮೃತರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಇನ್ನು ಅಗ್ನಿ ಅವಘಡ ಸಂದರ್ಭದಲ್ಲಿ ಹಲವು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಮೇಲಿಂದಲೇ ಕೆಳಗೆ ಧುಮುಕಿದ್ದಾರೆ. ಈ ವೇಳೆ ಕೆಳಗಡೆ ನಿಂತಿದ್ದ ಜನಸ್ತೋಮ ಅವರನ್ನು ಹೆಚ್ಚಿನ ಅಪಾಯವಾಗದಂತೆ ರಕ್ಷಿಸಿದೆ. ಆದರೂ ಕೆಳಗೆ ಬಿದ್ದವರ ಪೈಕಿ ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ವಿದ್ಯಾರ್ಥಿಗಳು ಕೆಳಗೆ ಹಾರುತ್ತಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಘಟನಾ ಸ್ಥಳಕ್ಕೆ 16 ಅಗ್ನಿಶಾಮಕ ವಾಹನಗಳು ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಂತೆಯೇ ಕಟ್ಟಡದಲ್ಲಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಅಲ್ಲದೆ ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. 
ಕಟ್ಟಡದ ಮಾಲೀಕ ಪರಾರಿ
ಇನ್ನು ಕಟ್ಟಡದ ಅಗ್ನಿ ಅವಘಡ ವಿಚಾರಕ್ಕೆ ಸಂಬಂಧಿಸಿದಂತೆ ಸೂರತ್ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಟ್ಟಡದಲ್ಲಿ ಯಾವುದೇ ರೀತಿಯ ಬೆಂಕಿ ನಿಯಂತ್ರಣ ವ್ಯವಸ್ಥೆ ಇರಲಿಲ್ಲ ಮತ್ತು ಅಗ್ನಿ ಅವಘಡದಂತಹ ಸಂದರ್ಭದಲ್ಲಿ ತುರ್ತಾಗಿ ಪರಾರಿಯಾಗಲು ಯಾವುದೇ ಪರ್ಯಾಯ ಮಾರ್ಗ ಕೂಡ ಇರಲಿಲ್ಲ. ಹೀಗಾಗಿ ಕಟ್ಟಡದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಕಟ್ಟಡದ ಮಾಲೀಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com