ಎರಡನೇ ಬಾರಿ ಕೇಂದ್ರ ಸಚಿವರಾಗಿ ಡಿವಿ ಸದಾನಂದಗೌಡ ಪ್ರಮಾಣ

ಬಿಜೆಪಿ ಹಿರಿಯನಾಯಕ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ ವಿ ಸದಾನಂದಗೌಡ ಅವರು ಗುರುವಾರ ಸಂಜೆ ರಾಷ್ಟ್ರಪತಿ ಭವನದ ಎದುರು...
ಸದಾನಂದಗೌಡ
ಸದಾನಂದಗೌಡ
ನವದೆಹಲಿ: ಬಿಜೆಪಿ ಹಿರಿಯನಾಯಕ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ ವಿ ಸದಾನಂದಗೌಡ ಅವರು ಗುರುವಾರ ಸಂಜೆ ರಾಷ್ಟ್ರಪತಿ ಭವನದ ಎದುರು ನಡೆದ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 
ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಡಿ ವಿ ಸದಾನಂದಗೌಡ ಅವರು ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲೂ ಸಚಿವರಾಗುತ್ತಿರುವ ಸದಾನಂದ ಗೌಡ ತಮ್ಮ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದಾರೆ. ಡಿ.ವಿ. ಸದಾನಂದ ಗೌಡ ಭಾರತೀಯ ಜನತಾ ಪಕ್ಷದ ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ. ಅತ್ಯತ್ತಮ ಸಂಘಟಕ ಹಾಗೂ ಕನ್ನಡ ಅರೆಭಾಷೆ ಮತ್ತು ತುಳು ಭಾಷಾಪ್ರೇಮಿ. ಸದಾನಂದಗೌಡರು, ಸುಳ್ಯ ತಾಲ್ಲೂಕಿನ ಮಂಡೆಕೊಲು ಗ್ರಾಮ ವೆಂಕಪ್ಪಗೌಡ ಮತ್ತು ಕಮಲಾ ದಂಪತಿಗಳ ಪುತ್ರನಾಗಿ 18 ಮಾರ್ಚ್ 1953 ರಲ್ಲಿ ಜನಿಸಿದರು. 
ಅವರ ಪ್ರಾರಂಭಿಕ ವಿದ್ಯಾಭ್ಯಾಸ, ಪುತ್ತೂರು ತಾಲ್ಲೂಕಿನ ಕೆಯ್ಯೂರ್ ಹಾಗೂ ಸುಳ್ಯದಲ್ಲಿ ನಡೆಯಿತು. ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿಗಳಿಸಿ ನಂತರ, ವೈಕುಂಠ ಬಾಳಿಗ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. 
1976 ರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ, ವಕೀಲಿ ವೃತ್ತಿ ಆರಂಭಿಸಿದ ಸದಾನಂದಗೌಡರು, ೧೯೮೧ರಲ್ಲಿ ಡಾಟಿ ಅವರನ್ನು ಮದುವೆಯಾದರು. ಈ ದಂಪತಿಗಳ ಮಗ ಕಾರ್ತಿಕ್ ಗೌಡ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಗಳಿಸಿದ್ದಾರೆ. ಸದಾನಂದ ಗೌಡರ ಮೊದಲನೆಯ ಮಗ, ಕೌಶಿಕ್ ಗೌಡ ಮೆಡಿಕಲ್ ವಿದ್ಯಾರ್ಥಿಯಾಗಿದ್ದರು. 2003ರಲ್ಲಿ ಪುತ್ತೂರಿನ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಸದಾನಂದ ಗೌಡ ಅವರು ಹಿಂದಿನ ಜನ ಸಂಘದ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು.
1994 ಮತ್ತು 1999 ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ವಿರೋಧ ಪಕ್ಷದ ಉಪನಾಯಕರಾದರು. 2004 ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೊಯ್ಲಿ ಅವರನ್ನು32 314 ಮತಗಳಿಂದ ಮಣಿಸಿ 14ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 
2009ರಲ್ಲಿ ಪಕ್ಷವು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವರ್ಗಾಯಿಸಿತ್ತು ನಂತರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 16ನೇ ಲೋಕಸಭೆಗೆ ಆಯ್ಕೆಯಾಗಿ ಮೋದಿ ಸರ್ಕಾರದಲ್ಲಿ ಅಂ ಕಿಅಂಶ ಹಾಗೂ ಯೋಜನಾ ಜಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ಇತ್ತೀಚಿಗಷ್ಟೇ 17ನೇ ಲೋಕಸಭೆಗೆ ಚುನಾಯಿತರಾಗಿ ಈಗ ಕೇಂದ್ರ ಸಂಪುಟ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com