ಬಿಹಾರ: ಚಾತ್ ಪೂಜೆ ವೇಳೆ 9 ಮಕ್ಕಳು ಸೇರಿದಂತೆ 11 ಮಂದಿ ದುರ್ಮರಣ
ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಚಾತ್ ಪೂಜೆ ವೇಳೆಯಲ್ಲಿ 9 ಮಕ್ಕಳು ಸೇರಿದಂತೆ 11 ಮಂದಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಅರ್ಘ್ಯ ಪೂಜೆ ಸಲ್ಲಿಸಿ ವಾಪಾಸ್ ಆಗುತ್ತಿದ್ದ ವೇಳೆ ಕಾಲ್ತುಳಿತ ಉಂಟಾದ ಪರಿಣಾಮ ಔರಂಗಾಬಾದ್ ಜಿಲ್ಲೆಯ ಡಿಯೋ ಪ್ರದೇಶದ ಸೂರ್ಯ ದೇವಾಲಯದ ಬಳಿ 16 ತಿಂಗಳ ಹೆಣ್ಣು ಮಗು ಸೇರಿದಂತೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ನಾಲ್ಕು ವರ್ಷದ ಪ್ರಿನ್ಸ್ ಕುಮಾರ್, ರಿಂಕಿ ಕುಮಾರ್ ಎಂದು ಗುರುತಿಸಲಾಗಿದೆ.
ಈ ಮಕ್ಕಳ ತಾಯಿಯಾದ ಸೀಮಾ ದೇವಿ ಹಾಗೂ ಮನೀಷಾ ಕುಮಾರಿ ಅವರಿಗೂ ಕಾಲ್ತುಳಿತದಲ್ಲಿ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಯನ್ನು ಆರಂಭಿಸಿದೆ. ಸೂರ್ಯ ದೇವಾಲಯದ ಬಳಿ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿದೆ ಎನ್ನಲಾಗಿದೆ
ಮತ್ತೊಂದು ಘಟನೆಯಲ್ಲಿ 14 ವರ್ಷದ ಬಾಲಕನೊಬ್ಬ ಗಾಂದಾಕ್ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಲಖಿಸಾರಾಯ್ ನಲ್ಲಿ ಇನ್ನಿಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ .ಇದೇ ರೀತಿಯಲ್ಲಿ ಖಾಗಾರಿಯಾ, ಮುಂಗರ್ ನಲ್ಲಿ ಇಬ್ಬರು, ವೈಶಾಲಿ ಯಲ್ಲಿ ಒಬ್ಬ ಬಾಲಕ ನದಿ ಹತ್ತಿರ ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಇಂದು ಬೆಳಗ್ಗೆ ಬಿಹಾರದ ಸಮಸ್ಠಿಪುರ ಜಿಲ್ಲೆಯ ಕಾಳಿ ಗುಹಾಂತರ ದೇವಾಲಯದ ಬಳಿ ಇಬ್ಬರು ಭಕ್ತಾಧಿಗಳು ಮೃತಪಟ್ಟಿದ್ದು, ಎಸ್ ಡಿಆರ್ ಎಫ್ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಕಠಿಣ ಆಚರಣೆಗಳಿಂದ ಚಾತ್ ಪೂಜೆಯನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ, ಈ ಸಮಯದಲ್ಲಿ ಭಕ್ತರು ಉಪವಾಸ ಇರುತ್ತಾರೆ ದೀರ್ಘಕಾಲದವರೆಗೆ ನೀರಿನಲ್ಲಿ ನಿಂತು ಸೂರ್ಯ ದೇವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಅಂತಿಮ ದಿನವಾದ ಇಂದು ಭಕ್ತಾಧಿಗಳು ನದಿಯ ದಂಡೆಯ ಮೇಲೆ ನಿಂತು ಸೂರ್ಯ ದೇವನಿಗೆ ಅರ್ಘ್ಯ ಪೂಜೆ ಸಲ್ಲಿಸಿದರು. ಹಿಂದೂ ಸಂಪ್ರದಾಯದ ಕಾರ್ತಿಕ ಮಾಸದ ಆರನೇ ದಿನ ಸೂರ್ಯ ದೇವನಿಗಾಗಿ ಚಾತ್ ಪೂಜೆ ಸಲ್ಲಿಸಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ