ಶಾರದಾ ಚಿಟ್ ಫಂಡ್ ಹಗರಣ: ರಾಜೀವ್ ಕುಮಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ರಾಜ್ಯದ ಸಿಐಡಿ ಹೆಚ್ಚುವರಿ ನಿರ್ದೇಶಕ ರಾಜೀವ್ ಕುಮಾರ್ ಅವರಿಗೆ ಕೋಲ್ಕತ್ತಾ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ಪೀಠ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.
ರಾಜೀವ್ ಕುಮಾರ್‌
ರಾಜೀವ್ ಕುಮಾರ್‌

ಕೋಲ್ಕತ್ತಾ: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ರಾಜ್ಯದ ಸಿಐಡಿ ಹೆಚ್ಚುವರಿ ನಿರ್ದೇಶಕ ರಾಜೀವ್ ಕುಮಾರ್ ಅವರಿಗೆ ಕೋಲ್ಕತ್ತಾ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ಪೀಠ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.

50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್‌ ಶ್ಯೂರಿಟಿಯೊಂದಿಗೆ ನ್ಯಾಯಮೂರ್ತಿಗಳಾದ ಶಾಹಿದುಲ್ಲಾ ಮುನ್ಸಿ ಮತ್ತು ಸುಭಾಷಿಸ್‌ ದಾಸ್‌ ಗುಪ್ತಾ ಅವರು ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಮಾತ್ರವಲ್ಲ ವಿಚಾರಣೆಗಾಗಿ 48 ಗಂಟೆಗಳ ಮೊದಲು ನೋಟಿಸ್ ಜಾರಿಮಾಡಬೇಕು ಎಂದು ಸಿಬಿಐಗೆ ಸೂಚಿಸಿತು.

ನಾಲ್ಕು ದಿನಗಳಿಂದ ಕುಮಾರ್ ಅವರ ಪರ ವಕೀಲರು ನಿರಂತರವಾಗಿ ಅರ್ಜಿ ಸಲ್ಲಿಸುತ್ತಿದ್ದರು. ಕೊನೆಗೆ ನಿನ್ನೆ ಅವರ ಮನವಿಯನ್ನು ನ್ಯಾಯಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಮನವಿಯನ್ನು ನಗರ ನ್ಯಾಯಾಲಯವು ತಿರಸ್ಕರಿಸಿದ ನಂತರ ಕುಮಾರ್ ಅವರು ಜಾಮೀನು ಕೋರಿ ಕಳೆದ ವಾರ ಹೈಕೋರ್ಟ್ ಮುಂದೆ ಹೊಸ ಮೇಲ್ಮನವಿ ಸಲ್ಲಿಸಿದ್ದರು. ಕುಮಾರ್ ಅವರ ಪತ್ನಿ ಸಂಚಿತಾ ಅವರು ಹೈಕೋರ್ಟ್ ಮುಂದೆ ಪತಿ ಪರವಾಗಿ ಅರ್ಜಿ ಸಲ್ಲಿಸಿದ್ದರು.

ಆರ್ಥಿಕ ಅಪರಾಧದಲ್ಲಿ ಬಂಧನಕ್ಕೆ ಮುಂಚಿತವಾಗಿ ಜಾಮೀನು ಪಡೆಯಲು ಸಲ್ಲಿಸಿರುವ ಆಧಾರಗಳು ನ್ಯಾಯಾಲಯಕ್ಕೆ ಸಾಮಾಧಾನ ತಂದಿಲ್ಲ ಎಂದು ಅಲಿಪೋರ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶನಿವಾರ ಕುಮಾರ್ ಅವರ ನಿರೀಕ್ಷಿತ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು.

ಕುಮಾರ್ 'ಪರಾರಿಯಾಗಿದ್ದಾರೆ' ಎಂದು ನ್ಯಾಯಾಲಯದಲ್ಲಿ ಸಿಬಿಐ ತಿಳಿಸಿತ್ತು. ಈ ಪ್ರಕರಣ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪ್ರಕರಣದ ಮಾದರಿಯಲ್ಲಿ ಇದೆ, ಚಿದಂಬರಂ ಅವರ ಜಾಮೀನು ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್ ತಿರಸ್ಕರಿಸಿದೆ ಎಂದು ಸಿಬಿಐ ವಾದಿಸಿತ್ತು.

ಈ ಪ್ರಕರಣವು ಮುಂಬರುವ ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಸೆಪ್ಟೆಂಬರ್ 13 ರಂದು ಹೈಕೋರ್ಟ್‌ನ ಏಕ ಸದಸ್ಯ ಪೀಠವು ಬಹು ಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧನದಿಂದ ಕುಮಾರ್ ಅವರಿಗೆ ನೀಡಿದ್ದ ರಕ್ಷಣೆಯನ್ನು ರದ್ದುಪಡಿಸಿತ್ತು.

ಜೂನ್‌ನಲ್ಲಿ, ಹೈಕೋರ್ಟ್‌ನ ರಜಾಕಾಲದ ನ್ಯಾಯಪೀಠದ ನ್ಯಾಯಾಧೀಶ ಪ್ರತೀಪ್ ಪ್ರಕಾಶ್ ಬ್ಯಾನರ್ಜಿ ಅವರು ಬಹುಕೋಟಿ ಶಾರದಾ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹೊರಡಿಸಿದ್ದ ನೋಟಿಸ್ ಅನ್ನು ರದ್ದುಪಡಿಸುವಂತೆ ಕೋರಿ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡಸಿ ಅವರಿಗೆ ಒಂದು ತಿಂಗಳ ಕಾಲ ಬಂಧನದಿಂದ ರಕ್ಷಣೆ ನೀಡಿದ್ದರು. 

ಪ್ರಕರಣವನ್ನು ಇತ್ಯರ್ಥಪಡಿಸುವವರೆಗೂ ಮಾಜಿ ನಗರ ಪೊಲೀಸ್ ಮುಖ್ಯಸ್ಥರು ಪಶ್ಚಿಮ ಬಂಗಾಳ ರಾಜ್ಯವನ್ನು ತೊರೆಯುವಂತಿಲ್ಲ ಮತ್ತು ಅವರು ತಮ್ಮ ಪಾಸ್‌ಪೋರ್ಟ್‌ ಅನ್ನು ಸಿಬಿಐಗೆ ಜಮಾ ಮಾಡಬೇಕು, ಶಾರದಾ ಚಿಟ್-ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐಗೆ ಸ್ವಾತಂತ್ರ್ಯವಿದೆ ಎಂದು ರಜಾ ಕಾಲದ ಪೀಠ ಹೇಳಿತ್ತು.

ಸಮನ್ಸ್ ಜಾರಿಗೊಳಿಸುವುದರ ಜೊತೆಗೆ, ಸಿಬಿಐ ಕುಮಾರ್ ವಿರುದ್ಧ ಲುಕ್ ಔಟ್ ನೋಟಿಸ್ ನೀಡಿತ್ತು. ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ವಲಸೆ ಅಧಿಕಾರಿಗಳಿಗೆ ಅವರು ದೇಶವನ್ನು ತೊರೆದರೆ ಏಜೆನ್ಸಿಯನ್ನು ಎಚ್ಚರಿಸುವಂತೆ ಸಿಬಿಐ ಸೂಚಿಸಿದ್ದರು.

ಸುಪ್ರೀಂಕೊರ್ಟ್‌ ನಿರ್ದೇಶನದ ಮೇರೆಗೆ ಸಿಬಿಐ ಪ್ರಕರಣವನ್ನು ವಹಿಸಿಕೊಳ್ಳುವ ಮೊದಲು ಕುಮಾರ್ ಅವರು ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿದ್ದರು.

ಈ ವರ್ಷದ ಆರಂಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ಅವರನ್ನು ಕೋಲ್ಕತಾ ಪೊಲೀಸ್ ಆಯುಕ್ತರ ಹುದ್ದೆಯಿಂದ ತೆಗೆದುಹಾಕಿದ ನಂತರ ರಾಜ್ಯ ಸರ್ಕಾರ ಇತ್ತೀಚೆಗೆ ಕುಮಾರ್ ಅವರನ್ನು ಸಿಐಡಿಯ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com