
ಮುಂಬೈ: ಮಹಾರಾಷ್ಟ್ರ ರಾಜ್ಯದ ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರವಾಗಿರುವ ವರ್ಲಿ ಕ್ಷೇತ್ರಕ್ಕೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ ವೇಳೆ ಅವರ ತಂಗೆ ಹಾಗೂ ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಹಾಗೂ ಶಿವಸೇನೆ ಪಕ್ಷದ ಇನ್ನಿತರೆ ನಾಯಕರು ಭಾಗವಹಿಸಿದ್ದರು.
ಆದಿತ್ಯ ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಶಿವಸೇನೆ ಮುಂಬೈ ನಲ್ಲಿ ರೋಡ್ ಶೋ ನಡೆಸಿದೆ. ರೋಡ್ ಶೋ ನಲ್ಲಿ ಶಿವಸೇನೆಯ ಪ್ರಮುಖ ನಾಯಕರು ಭಾಗವಹಿಸಿದ್ದಾರೆಂದು ವರದಿಗಳು ತಿಳಿಸಿವೆ.
ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಆದಿತ್ಯ ಅವರು ಕಣಕ್ಕಿಳಿಯುತ್ತಿದ್ದಾರೆ. ಠಾಕ್ರೆ ಪರಿವಾರದಿಂದ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಬೆಗೆ ಚುನಾವಣೆಗೆ ಸ್ಪರ್ಧೆ ಮಾಡಲಾಗುತ್ತಿದೆ. ಆದಿತ್ಯ ಠಾಕ್ರೆಯವರು ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉದ್ಧವ್ ಠಾಕ್ರೆಯವರು, ಚುನಾವಣೆಯಲ್ಲಿ ಆದಿತ್ಯಾ ಅವರಿಗೆ ಮುಂಬೈ ಬೆಂಬಲ ನೀಡುತ್ತದೆ ಎಂಬ ಭರವಸೆಯಿದೆ. ಸಾಮಾಜಿಕ ಸೇವೆ ಮಾಡುವುದು ನಮ್ಮ ಕುಟುಂಬದ ಸಂಪ್ರದಾಯವಾಗಿ ಬೆಳೆದು ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದು ಬೇಡವೆಂದು ನಿರ್ಧರಿಸಿದ್ದೆವು. ಆದರೆ, ಇದೀಗ ಸಮಯ ಬದಲಾಗಿದೆ. ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಆದಿತ್ಯ ಕೆಲಸ ಮಾಡುತ್ತಾರೆಂದು ನಾನು ಭರವಸೆ ನೀಡುತ್ತೇನೆಂದು ತಿಳಿಸಿದ್ದಾರೆ.
Advertisement