ಆರೆ ಕಾಲೊನಿಯಲ್ಲಿ ಇನ್ನು ಮುಂದೆ ಮರಗಳನ್ನು ಕಡಿಯಬೇಡಿ: ಮಹಾರಾಷ್ಟ್ರ ಸರ್ಕಾರಕ್ಕೆ 'ಸುಪ್ರೀಂ' ಆದೇಶ 

ಮುಂಬೈಯ ಆರೆ ಕಾಲೊನಿಯಲ್ಲಿ ಸಾವಿರಾರು ಮರಗಳನ್ನು ಕಡಿದು ನೆಲಸಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 21ಕ್ಕೆ ನಿಗದಿಪಡಿಸಿದೆ.
ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಆರೆ ಕಾಲೊನಿ ಸ್ಥಳದ ಒಂದು ವೈಮಾನಿಕ ನೋಟ
ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಆರೆ ಕಾಲೊನಿ ಸ್ಥಳದ ಒಂದು ವೈಮಾನಿಕ ನೋಟ

ನವದೆಹಲಿ: ಮುಂಬೈಯ ಆರೆ ಕಾಲೊನಿಯಲ್ಲಿ ಸಾವಿರಾರು ಮರಗಳನ್ನು ಕಡಿದು ನೆಲಸಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 21ಕ್ಕೆ ನಿಗದಿಪಡಿಸಿದೆ.


ಈ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದ ಬಂಧಿತ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಹೇಳಿದಾಗ ಬಿಡುಗಡೆಯಾಗದ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಂಬೈ ಸರ್ಕಾರ ಪರ ವಕೀಲ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಭರವಸೆ ನೀಡಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಪರಿಸರ ಇಲಾಖೆಯನ್ನು ಕೂಡ ಕಕ್ಷಿದಾರನನ್ನಾಗಿ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.


ಆರೆ ಕಾಲೊನಿಯಲ್ಲಿ ಇನ್ನು ಮುಂದೆ ಮರಗಳನ್ನು ಕಡಿಯಬಾರದು ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದೆ. 


ಮುಂಬೈ ಮೆಟ್ರೊ 3ಯ ಉದ್ದೇಶಿತ ಕಾರ್ ಶೆಡ್ ನಿರ್ಮಾಣಕ್ಕೆ ಆರೆ ಕಾಲೊನಿಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮರಗಳನ್ನು ಕಡಿದು ಹಾಕಿದ್ದಕ್ಕೆ ಸ್ಥಳೀಯ ಸಾರ್ವಜನಿಕರಿಂದ ಮತ್ತು ಪರಿಸರ ರಕ್ಷಣೆ ಕಾರ್ಯಕರ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಸರ್ಕಾರದ ಕ್ರಮವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.


ಇಂದು ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದು ಕಾಡುಗಳ ಅಭಿವೃದ್ಧಿಗೆ ನೆಟ್ಟು ಬೆಳೆಸಿದ ಮರಗಳೆಂದು ಕಂಡುಬರುತ್ತಿದೆ. ಕಾನೂನಾತ್ಮಕವಾಗಿ ಇಲ್ಲಿ ಇನ್ನು ಮುಂದೆ ಮರಗಳನ್ನು ಕಡಿಯಬಾರದು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದೆ. 

29 ಮಂದಿ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು: ಈ ಮಧ್ಯೆ ನಿನ್ನೆ ಮುಂಬೈಯ ಸೆಷನ್ ನ್ಯಾಯಾಲಯ, ಆರೆ ಕಾಲೊನಿಯಲ್ಲಿ ಮರಗಳನ್ನು ಕಡಿದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ 29 ಮಂದಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ಇವರು ಕರ್ತವ್ಯದ ಮೇಲೆ ಇರುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿದ್ದುದಲ್ಲದೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. 


ನಿನ್ನೆ ರಜಾ ದಿನದ ಕೋರ್ಟ್ ನ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಹೆಚ್ ಸಿ ಶಿಂದೆ 29 ಮಂದಿ ಪ್ರತಿಭಟನಾಕಾರರನ್ನು, ವೈಯಕ್ತಿಕ ಶ್ಯೂರಿಟಿ 7 ಸಾವಿರ ರೂಪಾಯಿ ಮತ್ತು ಇನ್ನು ಮುಂದೆ ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಷರತ್ತಿನೊಂದಿಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com