ನವದೆಹಲಿ: ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದು ಅಂತಿಮ ವಿಚಾರಣೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಪ್ರಕರಣದ ತೀರ್ಪು ಪ್ರಕಟವಾಗುವುದರಿಂದ ಇಂದಿನಿಂದಲೇ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿ ಡಿಸೆಂಬರ್ 10ರವರೆಗೂ ನಿಷೇಧಾಜ್ಞೆ ಮುಂದುವರೆಸಲು ಜಿಲ್ಲಾಡಳಿತ ನಿರ್ಧರಿಸಿದೆ ಎನ್ನಲಾಗಿದೆ. ಆ ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ನಿಷೇಧಾಜ್ಞೆ ತೆರವು ಅಥವಾ ಮುಂದುವರಿಕೆ ಕುರಿತು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ವಿವಾದಿತ ಜಾಗದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಈಗಿರುವ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಡ್ರೋಣ್ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಂಡು ಭದ್ರತಾ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಂತೆಯೇ ಅಯೋಧ್ಯೆಯಲ್ಲಿ ಪಟಾಕಿಗಳ ಮಾರಾಟ, ಖರೀದಿ ನಿಷೇಧಿಸಲಾಗಿದ್ದು, ಇಂತಹ ಚಟುವಟಿಕೆ ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎನ್ನಲಾಗಿದೆ. ಪಟಾಕಿ ಬಳಕೆ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಒಪ್ಪಿಗೆ ಅತ್ಯವಶ್ಯಕ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೀಪಾವಳಿ ಸಂದರ್ಭವಾಗಿರುವುದರಿಂದ ಪಟಾಕಿ ಮಳಿಗೆಗಳಿಗೆ ಕೋರ್ಟ್ ಸೂಚಿಸಿದ ಜಾಗ ಗುರುತ ಮಾಡಲಾಗಿದ್ದು, ಅಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
Advertisement