ರೈಲ್ವೆ ಖಾಸಗೀಕರಣ ವಿರೋಧಿಸಿ ರೈಲ್ವೆ ನೌಕರರ ಸಂಘಟನೆಗಳಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ರೈಲ್ವೆ ಖಾಸಗೀಕರಣ ನೀತಿ ವಿರೋಧಿಸಿ ರೈಲ್ವೆ ನೌಕರರ ಸಂಘಟನೆಗಳು ದೇಶದ ವಿವಿಧ ಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರದ ರೈಲ್ವೆ ಖಾಸಗೀಕರಣ ನೀತಿ ವಿರೋಧಿಸಿ ರೈಲ್ವೆ ನೌಕರರ ಸಂಘಟನೆಗಳು ದೇಶದ ವಿವಿಧ ಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

50 ರೈಲು ನಿಲ್ದಾಣಗಳನ್ನು ಹಾಗೂ 150 ಪ್ರಯಾಣಿಕ ರೈಲುಗಳನ್ನು ಖಾಸಗಿಯವರಿಗೆ ವಹಿಸುವುದು, ಲಖನೌ–ದೆಹಲಿ ಹಾಗೂ ಮುಂಬೈ–ಅಹ್ಮದಾಬಾದ್‌ ನಡುವೆ 'ತೇಜಸ್‌ ಎಕ್ಸ್‌ಪ್ರೆಸ್‌' ಹೆಸರಿನ ಎರಡು ಐಷರಾಮಿ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿಗೆ ಹಸ್ತಾಂತರಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

50 ರೈಲು ನಿಲ್ದಾಣಗಳನ್ನು ಹಾಗೂ 150 ಪ್ರಯಾಣಿಕ ರೈಲುಗಳನ್ನು ಖಾಸಗಿ ಕಂಪನಿಗೆ ವಹಿಸುವ ಸಂಬಂಧ ಕೇಂದ್ರ ಸರ್ಕಾರ ಕಾರ್ಯದರ್ಶಿ ಮಟ್ಟದ ಸಮಿತಿ ರಚಿಸಿ ಅಧಿಸೂಚನೆ ಹೊರಡಿಸಿದ್ದು, ಪ್ರತಿಭಟನಾಕಾರರು ಈ ಅಧಿಸೂಚನೆಯನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ಸಚಿವಾಲಯದ ಈ ನಡೆ ಕಾರ್ಮಿಕ ವಿರೋಧಿ ಮಾತ್ರವಲ್ಲ, ಪ್ರಯಾಣಿಕರ ವಿರೋಧಿಯೂ ಆಗಿದೆ. ಲೂಟಿಕೋರರಿಗೆ ಬೀಗದ ಕೀಲಿ ಕೊಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಖಾಸಗಿಯವರಿಗೆ ಒಮ್ಮೆ ರೈಲ್ವೆ ಸೇವೆ ಹಸ್ತಾಂತರವಾದರೆ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳು, ಅಂಗವಿಕಲರು, ಅನಾರೋಗ್ಯಪೀಡಿತರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ರಿಯಾಯಿತಿ ದರದಲ್ಲಿ ಪ್ರಯಾಣಿಸುತ್ತಿರುವವರಿಗೆ ರಿಯಾಯಿತಿ ಪ್ರಯಾಣ ಬಂದ್‌ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com