ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ

ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ವಿಧಾನಗಳ ಕುರಿತ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಗುರುವಾರ ಸಹಿ ಹಾಕಿದವು. 
ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ
ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ

ದೇರಾ ಬಾಬಾ ನಾನಕ್ (ಗುರ್ದಾಸ್ ಪುರ): ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ವಿಧಾನಗಳ ಕುರಿತ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಗುರುವಾರ ಸಹಿ ಹಾಕಿದವು. ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಭಾರತೀಯ ಮೂಲದ ಎಲ್ಲಾ ನಂಬಿಕೆಗಳ ಯಾತ್ರಿಕರು ಹಾಗೂ ವ್ಯಕ್ತಿಗಳಿಗೆ ಕಾರಿಡಾರ್ ಬಳಕೆ ಮಾಡುವ ಅವಕಾಶ ಕಲ್ಪಿಸುವ ಕಾರ್ಯಾರಂಭದ ಔಪಚಾರಿಕ ರೂಪುರೇಷೆಯನ್ನು ಅಳವಡಿಸಲಾಗಿದೆ. 
  
ಈ ಯಾತ್ರೆ ವೀಸಾ ಮುಕ್ತವಾಗಿರಲಿದ್ದು, ಯಾತ್ರಿಕರು ಸೂಕ್ತ ಪಾಸ್ ಪೋರ್ಟ್ ಮಾತ್ರ ಕೊಂಡೊಯ್ಯಬೇಕು. ಭಾರತೀಯ ಮೂಲದ ಯಾತ್ರಿಕರು ಪಾಸ್ ಪೋರ್ಟ್ ನೊಂದಿಗೆ ಒಇಸಿ ಅನ್ನು ಕೂಡ ಕೊಂಡೊಯ್ಯಬೇಕಾಗುತ್ತದೆ. ಈ ಕಾರಿಡಾರ್ ಮುಂಜಾನೆಯಿಂದ ರಾತ್ರಿಯವರೆಗೆ ತೆರೆದಿರುತ್ತದೆ. ಬೆಳಗ್ಗೆ ಯಾತ್ರೆಗೆ ತೆರಳಿದ ಜನರು ಅಂದೇ ಹಿಂದಿರುಗಬೇಕು. 
  
ಇದು ಕೆಲ ಅಧಿಸೂಚಿತ ದಿನಗಳನ್ನು ಹೊರತುಪಡಿಸಿ ವರ್ಷಾದ್ಯಂತ ಕಾರ್ಯ ನಿರ್ವಹಿಸುತ್ತದೆ. ಕಾರ್ಯ ನಿರ್ವಹಿಸದ ದಿನಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ.
  
ಒಪ್ಪಂದದ ಅನುಸಾರ, ಭಾರತ ಯಾತ್ರಿಕರ ಪಟ್ಟಿಯನ್ನು ಯಾತ್ರೆಯ ಹತ್ತು ದಿನ ಮುಂಚಿತವಾಗಿ ಪಾಕಿಸ್ತಾನಕ್ಕೆ ಕಳುಹಿಸುತ್ತದೆ ಮತ್ತು ನಾಲ್ಕು ದಿನಗಳ ಹಿಂದೆ ಯಾತ್ರಿಕರ ಕುರಿತು ದೃಢೀಕರಿಸಿದ ಮಾಹಿತಿ ನೀಡುತ್ತದೆ. ಪಾಕಿಸ್ತಾನ ಬಾಬಾ ನಾನಕ್ ಅವರ ದರ್ಶನ ಹಾಗೂ ಪ್ರಸಾದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 
  
2018ರ ನವೆಂಬರ್ 22ರಂದು ಸಂಪುಟ ಸಭೆಯಲ್ಲಿ ಗುರು ನಾನಕ್ ದೇವ್ ಅವರ 550ನೆ ಜನ್ಮ ಶತಮಾನೋತ್ಸವವನ್ನು ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಜೊತೆಗೆ, ಭಾರತೀಯ ಯಾತ್ರಿಕರಿಗೆ ಕರ್ತಾರ್ ಪುರದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿ ನೀಡಲು ಅನುಕೂಲವಾಗುವಂತೆ ದೇರಾ ಬಾಬಾ ನಾನಕ್ ನಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತಾರ್ ಪುರ ಸಾಹಿಬ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿತ್ತು. 
  
ಆದರೆ, ಪ್ರತಿ ಯಾತ್ರಿಕರಿಗೆ 20 ಡಾಲರ್ ಸೇವಾ ದರ ವಿಧಿಸುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಭಾರತ ಪಾಕ್ ಗೆ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com