ಚೆನ್ನೈ: ಹಸುವಿನ ಹೊಟ್ಟೆಯಿಂದ 52 ಕೆ.ಜಿ ಪ್ಲಾಸ್ಟಿಕ್, ಸಿರಿಂಜು, ಉಗುರು ಹೊರತೆಗೆದ ಪಶು ವೈದ್ಯರು!
ಚೆನ್ನೈ: ಮದ್ರಾಸ್ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರಿಗೆ ಇತ್ತೀಚೆಗೆ ಆಘಾತಕಾರಿಯಾಗುವಂತಹ ಘಟನೆ ನಡೆದಿದೆ. 6 ವರ್ಷದ ಹಸುವಿನ ಹೊಟ್ಟೆಯಿಂದ ಬರೋಬ್ಬರಿ 52 ಕೆಜಿ ನಿರುಪಯುಕ್ತ ವಸ್ತುಗಳನ್ನು ಹೊರತೆಗೆದಿದ್ದಾರೆ. ಅದು ಕೂಡ ಎಂತಹ ವಸ್ತುಗಳು ಅಂತೀರಾ? ಪ್ಲಾಸ್ಟಿಕ್, ಮದ್ದಿನ ಸೂಜಿಗಳು, ಉಗುರುಗಳು, ಆಹಾರ ಮತ್ತು ನಾಣ್ಯಗಳನ್ನು ಪ್ಯಾಕಿಂಗ್ ಮಾಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಗಳು.
ಹಸುವಿನ ಹೊಟ್ಟೆಯನ್ನು ಶಸ್ತ್ರಕ್ರಿಯೆ ಮಾಡಿ ಯಶಸ್ವಿಯಾಗಿ ವೈದ್ಯರು ಈ ನಿರುಪಯುಕ್ತ, ಜೀವಿ ಮತ್ತು ಭೂಮಿಗೆ ಹಾನಿಕಾರಕವಾದ ವಸ್ತುಗಳನ್ನು ಹೊರತೆಗೆದಿದ್ದಾರೆ.
ಹಸು ಸರಿಯಾಗಿ ಆಹಾರ ತಿನ್ನುತ್ತಿಲ್ಲ ಮತ್ತು ಅದಕ್ಕೆ ಸುಲಭವಾಗಿ ಸಗಣಿ ಮತ್ತು ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿ ಮುನಿರತ್ನಂ ಎಂಬುವವರು ಪಶುವೈದ್ಯಕೀಯ ಆಸ್ಪತ್ರೆಗೆ ಹಸುವನ್ನು ಕರೆತಂದಿದ್ದರು. ತಪಾಸಣೆ ನಡೆಸಿದ ವೈದ್ಯರು ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ವಸ್ತುಗಳಿವೆ ಎಂದು ತಿಳಿದು ಅದನ್ನು ಶಸ್ತ್ರಕ್ರಿಯೆ ಮಾಡಿ ಹೊರತೆಗೆಯೋಣವೆಂದು ನಿರ್ಧರಿಸಿದರು.
ಹಸು ಈಗ ಆರೋಗ್ಯವಾಗಿದ್ದು ಎಂದಿನಂತೆ ಆಹಾರ ಸೇವಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ಹೀಗೆ ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದು ಪರಿಸರಕ್ಕೆ ಮಾತ್ರವಲ್ಲ, ಜೀವಸಂಕುಲಕ್ಕೆ ಕೂಡ ಅಪಾಯಕಾರಿ ಎಂಬುದು ಈ ಘಟನೆಯೇ ಸಾಬೀತುಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ