ಯಾವ ರೀತಿ ಬೆಂಬಲ ಎಂಬುದನ್ನು ಶೆಟ್ಟರ್ ಸ್ಪಷ್ಟಪಡಿಸಲಿ: ಕುಮಾರಸ್ವಾಮಿ

ಸಚಿವ ಜಗದೀಶ್ ಶೆಟ್ಟರ್ ಅವರು ಜೆಡಿಎಸ್ ಪಕ್ಷದಿಂದ ಯಾವ ರೀತಿಯ ಬೆಂಬಲ ನಿರೀಕ್ಷಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಯಾವ ರೀತಿ ಬೆಂಬಲ ಎಂಬುದನ್ನು ಶೆಟ್ಟರ್ ಸ್ಪಷ್ಟಪಡಿಸಲಿ: ಕುಮಾರಸ್ವಾಮಿ
ಯಾವ ರೀತಿ ಬೆಂಬಲ ಎಂಬುದನ್ನು ಶೆಟ್ಟರ್ ಸ್ಪಷ್ಟಪಡಿಸಲಿ: ಕುಮಾರಸ್ವಾಮಿ

ಹಾವೇರಿ: ಸಚಿವ ಜಗದೀಶ್ ಶೆಟ್ಟರ್ ಅವರು ಜೆಡಿಎಸ್ ಪಕ್ಷದಿಂದ ಯಾವ ರೀತಿಯ ಬೆಂಬಲ ನಿರೀಕ್ಷಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿದರೂ, ದೇವೇಗೌಡರು ಹೇಳಿದರೂ ಒಂದೇ. ಏನು ಎಂಬುದನ್ನು ಡಿಸೆಂಬರ್ ಐದರ ನಂತರ ಸ್ಪಷ್ಟಪಡಿಸುತ್ತೇನೆ. ನನ್ನನ್ನು ಉತ್ತರ ಕರ್ನಾಟಕ ವಿರೋಧಿ ಎಂದು ತಮ್ಮ ಸ್ವಾರ್ಥಕ್ಕಾಗಿ ಬಿಂಬಿಸಿದ್ದೀರಿ. ಈಗ ತಾವೇನು ಮಾಡುತ್ತಿದ್ದೀರಿ ಜನರ ನೋವಿಗೆ ಸ್ಪಂದಿಸುತ್ತಿದೀರಾ ? ಎಂದು ಅವರು ಶೆಟ್ಟರ್ ವಿರುದ್ಧ ಕಿಡಿಕಾರಿದರು.

ಅನರ್ಹ ಶಾಸಕ ಬಿ.ಸಿ. ಪಾಟೀಲ್ ಮುಂಬೈನಲ್ಲಿದ್ದಾಗ ಹಣದ ಆಮಿಷ ಆರೋಪ ಕುರಿತು ಮಾತನಾಡಿದ ಅವರು, ನಾನು ಯಾರಿಗೂ ವೈಯಕ್ತಿಕವಾಗಿ ಕರೆ ಮಾಡಿಲ್ಲ. ಅವರು ಮೊದಲು ನನ್ನ ಜೊತೆ ಇದ್ದವರು, ಹಳೆ ಸ್ನೇಹಿತರು. ಹಣದ ಆಮಿಷ ಯಾರಿಗೂ ಒಡ್ಡಿಲ್ಲ ಎಂದರು. ನಾನು ಪಾಪದ ಹಣ ಗಳಿಸಿಲ್ಲ. ಸರ್ಕಾರದ ಹಣ ಲೂಟಿ ಮಾಡಿ ಶಾಸಕರ ಖರೀದಿಗೆ ಮುಂದಾಗಿಲ್ಲ. ಅವರೇ ಮಾಡಿಕೊಂಡು ಬಿಜೆಪಿಯಲ್ಲಿ ದೊಡ್ಡ ಸಾಧನೆ ಮಾಡುತ್ತೇವೆ ಎಂದು ಹೋಗಿದ್ದಾರೆ, ಹೋಗಲಿ ಎಂದರು.

ಕಳೆದ ಆಗಸ್ಟ್ ತಿಂಗಳಲ್ಲಿ ಆದ ಮಳೆಯಿಂದಾಗಿ ಕೆರೆ ಕಟ್ಟೆ ಜಲಾಶಯಗಳು ತುಂಬಿ ದೊಡ್ಡ ಮಟ್ಟದ ಅನಾಹುತ ಆಗಿವೆ. ಹಿಂಗಾರು ಮುಂಗಾರು ಒಟ್ಟಿಗೆ ಆಗುವ ಪರಿಸ್ಥಿತಿ ಎದುರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ನದಿಯ ತೀರದ ಹಳ್ಳಿಗಳು ಮುಳುಗಡೆಯಾಗಿವೆ. ಸರ್ಕಾರ ಪರಿಹಾರ ಕೊಡುವ ಘೋಷಣೆ ಮಾಡಿದರು, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಸರ್ಕಾರಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಅನೇಕ ಕಟ್ಟಡಗಳು ನಷ್ಟ ಆಗಿವೆ. ರೈತರ ಬೆಳೆಯೂ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಸರ್ಕಾರ ಎ ಬಿ ಸಿ ಮೂರು ಹಂತದಲ್ಲಿ ಹಣ ಬಿಡುಗಡೆ ಮಾಡಲು ಹೊರಟಿದೆ ಎಂದರು. ಹಾವೇರಿಯ 24 ಹಳ್ಳಿಯಲ್ಲಿ ಸಂಪೂರ್ಣ ಪುನರ್ವಸತಿ ಮಾಡಬೇಕು ಎಂದು ಮನವಿ ಮಾಡುತ್ತಿದ್ದು, ತಾತ್ಕಾಲಿಕವಾಗಿ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮುಂದೆಯೂ ಪ್ರವಾಹ ಆದರೆ ಅದೇ ಸ್ಥಿತಿಯಾಗಿದೆ. ಹೀಗಾಗಿ ಸರ್ಕಾರ ಅವರಿಗೆ ಶಾಶ್ವತ ಪರಿಹಾರ ನೀಡಬೇಕಾಗಿದೆ ಎಂದರು.

ಬೆಳೆ ಪರಿಹಾರ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.ರೈತರು ಸಾಲ ಮಾಡಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಎನ್ ಡಿ ಆರ್ ಎಫ್ ಮೂಲಕ ಹಣ ನೀಡಲು ಮುಂದಾದರೇ, ಸಾಕಾಗುವುದಿಲ್ಲ ಎಂದರು‌. ನಾನು ಕೊಡಗಿನಲ್ಲಿ ಎನ್ ಡಿ ಆರ್ ಎಫ್ ಮಾರ್ಗದರ್ಶಿ ಬಿಟ್ಟು ಎಕರೆಗೆ 35  ಸಾವಿರ ರೂ ನೀಡಿದೆ. ಸರ್ಕಾರಕ್ಕೆ ಕೆಲವು ಸಲಹೆ ನೀಡುತ್ತೇನೆ. ಟೀಕೆ ಮಾಡುವುದರಿಂದ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದರು.

ಸಾಲಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರದಲ್ಲಿ ಎಲ್ಲಾ ಸರಿದೂಗಿಸಲಾಗಿದ್ದು,  ಬ್ಯಾಂಕ್ ಅಧಿಕಾರಿಗಳು ದಾರಿ ತಪ್ಪಿಸಿದರೆ ತಮ್ಮ ಗಮನಕ್ಕೆ ತನ್ನಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com