ಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್
ಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್

ಚಂದ್ರಯಾನ-2 ಮಿಷನ್ ಶೇ.95ರಷ್ಟು ಗುರಿ ಸಾಧಿಸಿದೆ: ಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್

ಮಹತ್ವಾಕಾಂಕ್ಷೆ ಮೂಡಿಸಿದ್ದ ಚಂದ್ರಯಾನ-2 ಮಿಷನ್ ಶೇ.95ರಷ್ಟು ತನ್ನ ಗುರಿಯನ್ನು ಮುಟ್ಟಿದೆ. ಆದರೆ, ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವಲ್ಲಿ ಲ್ಯಾಂಡರ್ ವಿಫಲವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಶನಿವಾರ ಹೇಳಿದ್ದಾರೆ. 
Published on

ಬೆಂಗಳೂರು: ಮಹತ್ವಾಕಾಂಕ್ಷೆ ಮೂಡಿಸಿದ್ದ ಚಂದ್ರಯಾನ-2 ಮಿಷನ್ ಶೇ.95ರಷ್ಟು ತನ್ನ ಗುರಿಯನ್ನು ಮುಟ್ಟಿದೆ. ಆದರೆ, ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವಲ್ಲಿ ಲ್ಯಾಂಡರ್ ವಿಫಲವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಶನಿವಾರ ಹೇಳಿದ್ದಾರೆ. 

ಆರ್ಬಿಟರ್ ಇನ್ನೂ ಉತ್ತಮವಾಗಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರಯಾನ-2 ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವುದರ ಜೊತೆಗೆ ಬಹಳಷ್ಟು ಗುರಿಗಳನ್ನು ಹೊಂದಿದೆ. ಈ ಬಗ್ಗೆ ಹೆಚ್ಚು ಆಲೋಚನೆ ಮಾಡುವ ಅಗತ್ಯವಿಲ್ಲ. ಚಂದ್ರಯಾನ-2 ಈಗಾಗಲೇ ಶೇ.95ರಷ್ಟು ತನ್ನ ಗುರಿಯನ್ನು ಸಾಧಿಸಿದೆ. ಈಗಾಗಲೇ ಆರ್ಬಿಟರ್ ಚಂದ್ರನ ಅಂಗಳ ತಲುಪಿದ್ದು, ಅತ್ಯುತ್ತಮ ಮ್ಯಾಪಿಂಗ್ (ಉಪಗ್ರಹ ಆಧಾರಿತ ಚಿತ್ರ) ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. 

ದಶಕಗಳ ಹಿಂದೆ ನಡೆಸಿದ್ದ ಚಂದ್ರಯಾನ-1 ಮಿಷನ್ನ ಮುಂದುವರೆದ ಭಾಗ ಚಂದ್ರಯಾನ-2 ಆಗಿದೆ. ಈ ಮಿಷನ್ ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್)ನ್ನು ಒಳಗೊಂಡಿದೆ. 

ಚಂದ್ರಯಾನ-2 ಇನ್ನೂ ಮುಗಿದಿಲ್ಲ, ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಾಗಿರುವುದಿಂದ ಚಂದ್ರಯಾನ-2 ಮುಗಿದೇ ಹೋಯಿತು ಎಂದು ಹೇಳುವ ಅಗತ್ಯವಿಲ್ಲ. 2379 ಕೆಜಿ ತೂಕವನ್ನು ಆರ್ಬಿಟರ್ ಹೊಂದಿದ್ದು, ಇದು ಇನ್ನೂ 1 ವರ್ಷ ಚಂದ್ರನ ಸುತ್ತಲೂ ತಿರುಗುತ್ತಲಿರುತ್ತದೆ. ಚಂದ್ರನ ಮೇಲ್ಮೈನಿಂದ 100 ಕಿಮೀ ದೂರದಲ್ಲಿ ಈ ಆರ್ಬಿಟರ್ ಸುತ್ತುತ್ತಿದ್ದು, ಮೇಲ್ಮೈಗೆ ಸಂಬಂಧಿಸಿದ ಸಾಕಷ್ಟು ವೈಜ್ಞಾನಿಕ, ಭೌಗೋಳಿಕ ಹಾಗೂ ಇತರೆ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಲಿದೆ. ಲ್ಯಾಂಡರ್ ಸಂಪರ್ಕ ಕಡಿದುಕೊಂಡಿರುವುದು ನಿಜಕ್ಕೂ ಬೇಸರವನ್ನು ತಂದಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ಎಂದಿಗೂ ಊಹಿಸಿರಲಿಲ್ಲ. 

ಆಪರೇಶನ್ 2.1 ಕಿಮೀಗೂ ಹಿಂದಿನದ್ದನ್ನೂ ನೋಡಿದರೆ ಅರ್ಥ ಮಾಡಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿದ್ದ ಸಾಕಷ್ಟು ಮಂದಿ ದೇವರಲ್ಲಿ ಪ್ರಾರ್ಥಿಸಿದ್ದೂ ಉಂಟು. ಏಕೆಂದರೆ, ಸಾಕಷ್ಟು ಯಂತ್ರಗಳು ನಿಖರವಾಗಿ ಕೆಲಸ ಮಾಡಬೇಕಿತ್ತು. ಹಾಗಿದ್ದರೆ ಮಾತ್ರವೇ ಅಂತಿಮವಾಗಿ ಚಂದ್ರನ ಅಂಗಳ ಪ್ರವೇಶಿಸಲು ಸುಲಭವಾಗುತ್ತಿತ್ತು. 

ಪಟ್ಟಿ ಮಾಡಲು ಹೋದರೆ, ಕನಿಷ್ಟ ಎಂದರೂ 10 ತಪ್ಪುಗಳಾದರೂ ನಡೆದಿವೆ. ಯಾವ ರೀತಿಯ ತಪ್ಪುಗಳಾಗಿರಬಹುದು ಎಂದುನ್ನು ಊಹಿಸುವುದು ಇದೀಗ ಕಷ್ಟ. ಆದರೆ, ಈ ವರೆಗೂ ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕೊನೆಯ 10 ಸೆಕೆಂಡ್ ಗಳಲ್ಲಿ ಪಥ ಮತ್ತು ವೇಗದ ಹಾದಿಯಲ್ಲಿ ವಿಚಲನ ಕಂಡು ಬಂದಿದೆ. ಖಂಡಿತವಾಗಿಯೂ ಇಸ್ರೋ ಈ ಬಗ್ಗೆ ಕಂಡು ಹಿಡಿಯಲಿದೆ ಎಂದು ತಿಳಿಸಿದ್ದಾರೆ. 

ಲ್ಯಾಂಡರ್ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಕೊಂಡಿದೆ. ಮತ್ತೆ ಸಂಪರ್ಕಕ್ಕೆ ಸಿಗುವ ಯಾವುದೇ ಭರವಸೆಗಳಿಲ್ಲ. ಮತ್ತೆ ಸಂಪರ್ಕಕ್ಕೆ ಪಡೆದುಕೊಳ್ಳುವುದು ಬಹಳ ಕಷ್ಟಕರ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com