ಟ್ರಾಫಿಕ್ ಪೊಲೀಸ್ ವಾಹನ ತಡೆಯುತ್ತಿದ್ದಂತೆಯೇ ಹೃದಯಾಘಾತ; ಕಾರು ಚಾಲಕನ ಸಾವು!
ನೂತನ ಸಂಚಾರಿ ನಿಯಮ, ದುಬಾರಿ ದಂಡದ ಎಫೆಕ್ಟ್; ನೋಯ್ಡಾದಲ್ಲಿ ಘಟನೆ
ನವದೆಹಲಿ: ಟ್ರಾಫಿಕ್ ಪೊಲೀಸ್ ವಾಹನ ತಡೆಯುತ್ತಿದ್ದಂತೆಯೇ ಹೃದಯಾಘಾತವಾಗಿ ಕಾರು ಚಾಲಕ ಮೃತಪಟ್ಟಿರುವ ಘಟನೆ ನೊಯ್ಡಾದಲ್ಲಿ ಸಂಭವಿಸಿದೆ.
ನೂತನ ಸಂಚಾರಿ ನಿಯಮಗಳು ಜಾರಿಯಾದ ಬಳಿಕ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಇದೀಗ ವಿಲನ್ ಗಳಾಗಿ ಹೋಗಿದ್ದು, ಟ್ರಾಫಿಕ್ ಪೊಲೀಸರು ವಾಹನ ತಡೆಯುತ್ತಿದ್ದಂತೆಯೇ ಹೌಹಾರುತ್ತಿದ್ದಾರೆ. ಬೆಳಗ್ಗೆ ವಾಹನವನ್ನು ತೆಗೆಯುತ್ತಲೇ ಟ್ರಾಫಿಕ್ ಪೊಲೀಸರಿಗೆ ಸಿಗದಂತೆ ಕಾಪಾಡು ಎಂದು ದೇವರಿಗೆ ಮೊರೆ ಇಡುವ ಪರಿಸ್ಥಿತಿ ಎದುರಾಗಿದೆ.
ಇನ್ನು ಇತ್ತ ರಾಜಧಾನಿ ದೆಹಲಿಯ ಸಮೀಪವಿರುವ ನೊಯ್ಡಾದಲ್ಲಿ ಟ್ರಾಫಿಕ್ ಪೊಲೀಸ್ ವಾಹನ ತಡೆಯುತ್ತಿದ್ದಂತೆಯೇ ಹೃದಯಾಘಾತವಾಗಿ ಕಾರು ಚಾಲಕ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ನಿನ್ನೆ ಸಂಜೆ ಸುಮಾರು 6 ಗಂಟೆ ಹೊತ್ತಿನಲ್ಲಿ ನೋಯ್ಡಾದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಒಂದು ಕಾರನ್ನು ಕೂಡ ಅಧಿಕಾರಿಗಳು ಅಡ್ಡಗಟ್ಟಿದ್ದಾರೆ.
ಇತ್ತ ತನ್ನ ವಾಹನವನ್ನು ಟ್ರಾಫಿಕ್ ಪೊಲೀಸ್ ತಡೆಯುತ್ತಿದ್ದಂತೆಯೇ ಕಾರಿನ ಚಾಲಕ ಆಘಾತಗೊಂಡಿದ್ದು, ಆತನಿಗೆ ಕಾರಿನಲ್ಲೇ ಹೃದಯಾಘಾತವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟುಹೊತ್ತಿಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಕಾರಿನ ಚಾಲಕನ ಮಾಹಿತಿ ಬಹಿರಂಗವಾಗಿಲ್ಲವಾದರೂ, ಆತನನ್ನು ತಪಾಸಣೆ ಮಾಡಿದ್ದ ವೈದ್ಯರು ಆತ ಸಕ್ಕರೆ ಖಾಯಿಲೆ ಮತ್ತು ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಈ ಘಟನೆ ಸಂಬಂಧ ಮಾಹಿತಿ ನೀಡಿರುವ ದೆಹಲಿಯ ಗೌತಮ್ ಬುದ್ಧ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಕೃಷ್ಣ ಅವರು, ಘಟನೆಯಲ್ಲಿ ಟ್ರಾಫಿಕ್ ಪೊಲೀಸ್ ಪೇದೆ ಯಾವುದೇ ಪ್ರಮಾದವೆಸಗಿಲ್ಲ. ಅವರು ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಅಲ್ಲದೆ ಚಾಲಕ ಹೃದಯಾಘಾತಕ್ಕೆ ಒಳಗಾಗುತ್ತಿದ್ದಂತೆಯೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದೊಂದ ಆಕಸ್ಮಿಕ ಘಟನೆಯಷ್ಟೇ. ಆದರೂ ಈಕುರಿತಂತೆ ತನಿಕೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಮೃತ ವ್ಯಕ್ತಿಯ ತಾಯಿ, ನಾನು ಕೂಡ ಕಾರಿನಲ್ಲಿ ಇದ್ದೆ. ನನ್ನ ಮಗ ಮತ್ತು ನಾನು ಇಬ್ಬರೂ ಸೀಟ್ ಬೆಲ್ಟ್ ಧರಿಸಿದ್ದೆವು. ಆದರೂ ಟ್ರಾಫಿಕ್ ಪೊಲೀಸ್ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಇದರಿಂದ ನನ್ನ ಮಗನಿಗೆ ಆಘಾತವಾಯಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ