ಮೈಸೂರು ಪಾಕ್ ಮೈಸೂರಿನದ್ದಲ್ಲ, ತಮಿಳುನಾಡಿನದ್ದು?: ಇಲ್ಲಿದೆ ವರದಿಯ ಅಸಲಿಯತ್ತು....
ನವದೆಹಲಿ: ಮೈಸೂರು ಪಾಕ್ ಎಲ್ಲಿಯದ್ದು? ಇದೆಂಥಾ ಪ್ರಶ್ನೆ ಹೆಸರಲ್ಲೇ ಇದ್ಯಲ್ಲಾ ಯಾರನ್ನು ಕೇಳಿದರೂ ಮೈಸೂರಿನದ್ದೇ ಎಂಬ ಉತ್ತರ ಸಿದ್ಧವಾಗಿರುತ್ತೆ. ಆದರೆ ಈಗ ಮೈಸೂರು ಪಾಕ್ ಮೈಸೂರಿನದ್ದಲ್ಲ ಎಂಬ ವರದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.
ವೈರಲ್ ಆಗಿದ್ದು ಹೇಗೆ?
ಸ್ವರಾಜ್ಯದ ಅಂಕಣಕಾರ ಆನಂದನ್ ರಂಗನಾಥನ್ ಟ್ವೀಟ್ ಮಾಡಿದ್ದು, ಮೈಸೂರುಪಾಕ್ ನ ಪಾಕ್ ನ ಭೌಗೋಳಿಕ ಗುರುತನ್ನು ತಮಿಳುನಾಡಿಗೆ ನೀಡುವ ಸಂಬಂಧ ಏಕಸದಸ್ಯ ಸಮಿತಿಯ ಪರವಾಗಿ ಟೋಕನ್ ಆಫ್ ಅಪ್ರಿಸಿಯೇಷನ್ ನ್ನು ಸ್ವೀಕರಿಸಿದ್ದು ಸಂತೋಷವಾಗಿದೆ, ಮಾತುಕತೆ ನಡೆಯುತ್ತಿದೆ ಎಂದಿದ್ದರು.
ಈ ಟ್ವೀಟ್ ನ್ನೇ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ತಮಿಳುನಾಡಿಗೆ ಮೈಸೂರ್ ಪಾಕ್ ನ ಜಿಐ ಸಿಕ್ಕೇ ಬಿಡ್ತೇನೋ ಎನ್ನುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಮುಗಿಬಿದ್ದಿದ್ದವು. ಆದರೆ ಆ ನಂತರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಈ ಸಂಬಂಧ ಟ್ವೀಟ್ ಮಾಡಿದ್ದು, ಆನಂದ್ ರಂಗನಾಥನ್ ಮಾಡಿದ್ದು ಲಘು ಹಾಸ್ಯದ ಟ್ವೀಟ್ ಎಂದು ತಿಳಿದುಬಂದಿದೆ.
ಮೈಸೂರು ಪಾಕ್ ನ ಇತಿಹಾಸ
ಮೈಸೂರು ಪಾಕ್ ಮೊದಲು ತಯಾರಾಗಿದ್ದು ಮೈಸೂರು ಅರಮನೆ ಅಡುಗೆಮನೆಯಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರು ಈ ಸಿಹಿಯನ್ನು ತಯಾರಿಸಿದರು. ಕಡಲೆ ಹಿಟ್ಟಿನ ಜತೆ ತುಪ್ಪ ಮತ್ತು ಸಕ್ಕರೆ ಮಿಶ್ರಣದ ಪಾಕ ತಯಾರಿಸಿ ಅದನ್ನು ಬೇಕೆಂದ ಆಕಾರಕ್ಕೆ ತುಂಬಿದರು. ಒಣಗಿದ ನಂತರ ಅದು ಮಿಠಾಯಿ ರೀತಿಯಲ್ಲಿ ಕಂಡುಬಂತು. ಅದರ ಹೆಸರು ಕೇಳಿದಾಗ, ಮಾದಪ್ಪನವರು ಮನಸ್ಸಿನಲ್ಲಿ ಏನೂ ಆಲೋಚಿಸದ ಅವರು ಇದು ಕೇವಲ 'ಮೈಸೂರು ಪಾಕ್' ಎಂದು ಕರೆದರು. (ಪಾಕ್ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ