ಐಎನ್ಎಸ್ ವಿಕ್ರಾಂತ್ ನ ಉಪಕರಣ ಕಳ್ಳತನ: ಕೊಚ್ಚಿ ಶಿಪ್ ಯಾರ್ಡ್ ಭದ್ರತಾ ಲೋಪ ಜಗಜ್ಜಾಹಿರು!
ಕೊಚ್ಚಿ: ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಲ್ಲಿನ ಉಪಕರಣ ಕಳ್ಳತನ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕೊಚ್ಚಿ ಶಿಪ್ ಯಾರ್ಡ್ ಭದ್ರತಾ ಲೋಪ ಜಗಜ್ಜಾಹಿರಾಗುವಂತೆ ಮಾಡಿದೆ.
ಕೇರಳದ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಐಎನ್ಎಸ್ ವಿಕ್ರಾಂತ್ ನೌಕೆ ತಯಾರಾಗುತ್ತಿದ್ದು, ಇಲ್ಲಿಯೇ ವಿಮಾನ ವಾಹಕ ನೌಕೆಯ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿನ ಎಲೆಕ್ಟ್ರಾನಿಕ್ ಡಿಜಿಟಲ್ ಉಪಕರಣವೊಂದನ್ನು ಕಳವು ಮಾಡಲಾಗಿದೆ. ವಿಮಾನ ವಾಹಕ ನೌಕೆಯ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿನ ಪ್ರಮುಖ ಉಪಕರಣ ಇದಾಗಿದ್ದು, ಇದನ್ನೇ ಕಳ್ಳತನ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನು ಐಎನ್ಎಸ್ ವಿಕ್ರಾಂತ್ ನಿರ್ಮಾಣವಾಗುತ್ತಿರುವ ಕೊಚ್ಚಿನ್ ಶಿಪ್ ಯಾರ್ಡ್ ಅಭೂತಪೂರ್ವ ಭದ್ರತೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು, ಅರೆ ಸೇನಾಪಡೆಗಳು ಮತ್ತು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೆ ಶಿಪ್ ಯಾರ್ಡ್ ನಾದ್ಯಂತ ಸಿಸಿಟಿವಿ ಕ್ಯಾಮೆರಾಗಳು 24 ಗಂಟೆಗಳ ವಿಚಕ್ಷಣ ತಂಡ ಕಾರ್ಯ ನಿರ್ವಹಿಸುತ್ತಿರುತ್ತದೆ. ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ ತಯಾರಾಗುತ್ತಿರುವ ಕೊಚ್ಚಿನ್ ಶಿಪ್ ಯಾರ್ಡ್ ಗೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದೆ. ಹೀಗಿದ್ದೂ ಇಲ್ಲಿ ಕಳ್ಳತನವಾಗಿರುವುದು ಶಿಪ್ ಯಾರ್ಡ್ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ.
ಅಭೇಧ್ಯ ಕೋಟೆಯಾಗಿರುವ ಇಲ್ಲಿಗೆ ಹೊರಗಿನವರು ಬಂದು ಉಪಕರಣ ಕಳವು ಮಾಡಲು ಸಾಧ್ಯವೇ ಇಲ್ಲ. ಇದು ಒಳಗಿನವರ ಕೆಲಸವೇ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದೇ ಕಾರಣಕ್ಕೆ ಪ್ರಕರಣವನ್ನು ಕೇರಳ ಸರ್ಕಾರ ಮತ್ತು ಕೇರಳ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಹೇಳಿದ್ದಾರೆ.
ಇನ್ನು ಐಎನ್ಎಸ್ ವಿಕ್ರಾಂತ್ ಸುಮಾರು 40 ಸಾವಿರ ಟನ್ ತೂಕವಿದ್ದು, ಈ ಹಿಂದಿನ ಯುದ್ಧ ವಿಮಾನ ವಾಹಕಗಳಲ್ಲೇ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ವಿಕ್ರಾಂತ್ ಗೆ ಅಳವಡಿಸಲಾಗುತ್ತಿದೆ. 60 ಮೀಟರ್ ಉದ್ಧದ ವಿಕ್ರಾಂತ್ 260 ಮೀಟರ್ ಉದ್ಧವಿದೆ. ವಿಕ್ರಾಂತ್ ನಲ್ಲಿ ಎರಡು ರನ್ ವೇ ಗಳಿದ್ದು, ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ವಿಕ್ರಾಂತ್ ಕಾರ್ಯ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ