ವಾಯುಪಡೆಯ ನೂತನ ಮುಖ್ಯಸ್ಥರಾಗಿ ಆರ್​.ಕೆ.ಎಸ್​ ಭಡೌರಿಯಾ ಅಧಿಕಾರ ಸ್ವೀಕಾರ

ಭಾರತೀಯ ವಾಯುಪಡೆಯ (ಐಎಎಫ್​) ನೂತನ ಮುಖ್ಯಸ್ಥರಾಗಿ ಏರ್ ಚೀಫ್​ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭಡೌರಿಯಾ ಅಧಿಕಾರ ಸೋಮವಾರ ಸ್ವೀಕರಿಸಿದರು.
ಅಧಿಕಾರ ಸ್ವೀಕಸಿದ ಭಡೌರಿಯಾ
ಅಧಿಕಾರ ಸ್ವೀಕಸಿದ ಭಡೌರಿಯಾ
Updated on

ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್​) ನೂತನ ಮುಖ್ಯಸ್ಥರಾಗಿ ಏರ್ ಚೀಫ್​ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭಡೌರಿಯಾ ಅಧಿಕಾರ ಸೋಮವಾರ ಸ್ವೀಕರಿಸಿದರು.

ನಿಕಟಪೂರ್ವ ಏರ್​ಚೀಫ್ ಮಾರ್ಷಲ್ ಬಿ.ಎಸ್​. ಧನೋವಾ ಅವರು ಸೋಮವಾರ ಭಡೌರಿಯಾ ಅವರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದರು. ಇನ್ನು ಅಧಿಕಾರ ಸ್ವೀಕರಿಸಿದ ಬಳಿಕ ಭಡೌರಿಯಾ ಅವರು, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ಭಡೌರಿಯಾ ಅವರು,  ಪಾಕಿಸ್ತಾನ ಮತ್ತು ಚೀನಾ ವಿಚಾರವಾಗಿ ಭಾರತೀಯ ಸೇನೆಗೆ ರಫೆಲ್ ಯುದ್ಧ ವಿಮಾನ ಪ್ರಮುಖವಾಗುತ್ತದೆ. ರಫೆಲ್ ಮೂಲಕ ವಾಯುಸೇನೆಯ ಸಾಮರ್ಥ್ಯ ವೃದ್ಧಿಯಾಗಲಿದ್ದು, ರಫೆಲ್ ಗೇಮ್ ಚೇಂಜರ್ ಆಗಲಿದೆ ಎಂದು ಹೇಳಿದರು. ಅಂತೆಯೇ ಬಾಲಾಕೋಟ್ ನಲ್ಲಿ ನಡೆದ ರೀತಿಯ ಯಾವುದೇ ವಾಯುದಾಳಿಗಳ ನಡೆಸಲು ವಾಯುಸೇನೆ ಸರ್ವಸನ್ನದ್ಧವಾಗಿದೆ. ಮುಂದೆಯೂ ಕೂಡ ಸರ್ವ ಸನ್ನದ್ಧವಾಗಿಯೇ ಇರಲಿದೆ. ಯಾವುದೇ ರೀತಿಯ ಬಾಹ್ಯಾ ಬೆದರಿಕೆಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಭಡೌರಿಯಾ ಹೇಳಿದರು.

ಇದೇ ವೇಳೆ ಬಾಲಾಕೋಟ್ ಉಗ್ರ ಕ್ಯಾಂಪ್ ಗಳ ಕಾರ್ಯ ನಿರ್ವಹಣೆ ಕುರಿತು ಮಾತನಾಡಿದ ಅವರು, ನಮಗೆ ಈ ಕುರಿತಂತೆ ಮಾಹಿತಿ ಇದೆ. ಈ ಕುರಿತಂತೆ ಶೀಘ್ರದಲ್ಲೇ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಮತ್ತೊಂದು ವಾಯುದಾಳಿಯ ಪರೋಕ್ಷ ಎಚ್ಚರಿಕೆ ನೀಡಿದರು.  ಇನ್ನು ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ನೀಡಿದ್ದ ಪರಮಾಣು ದಾಳಿ ಕುರಿತು ಮಾತನಾಡಿದ ಭಡೌರಿಯಾ, ಅವರ ಭಾಷಣವೇ ಅಣ್ವಸ್ತ್ರ ಕುರಿತಂತೆ ಅವರ ನಿಲುವು ಸ್ಪಷ್ಟಪಡಿಸುತ್ತಿದೆ. ಆದರೆ ನಾವೂ ಕೂಡ ಯಾವುದೇ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿದ್ದೇವೆ ಎಂದು ತಿರುಗೇಟು ನೀಡಿದರು.

ಇನ್ನು ವಾಯುಪಡೆ ಮುಖ್ಯಸ್ಥ ಸ್ಥಾನಕ್ಕೆ ಭಡೌರಿಯಾ ಅವರನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ ಆರಂಭದಲ್ಲೇ ಆಯ್ಕೆ ಮಾಡಿತ್ತು. ಇಂದಿನಿಂದ ಎರಡು ವರ್ಷಗಳ ಅವಧಿಗೆ ಐಎಎಫ್​ನ ಮುಖ್ಯಸ್ಥರಾಗಿ ಭಡೌರಿಯಾ ಕಾರ್ಯ ನಿರ್ವಹಿಸಲಿದ್ದಾರೆ. 

ನ್ಯಾಷನಲ್ ಡಿಫೆನ್ಸ್​ ಅಕಾಡೆಮಿಯ (ಎನ್​ಡಿಎ) ಹಳೆಯ ವಿದ್ಯಾರ್ಥಿಯಾದ ಭಡೌರಿಯಾ, 26 ವಿವಿಧ ಬಗೆಯ ಯುದ್ದವಿಮಾನಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅವರು 4,250 ಗಂಟೆ ಯುದ್ದ ವಿಮಾನಗಳ ಹಾರಾಟ ನಡೆಸಿದ ಅನುಭವಗಳಿಸಿಕೊಂಡಿದ್ದಾರೆ. ವಾಯುಪಡೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಭಡೌರಿಯಾ, ಐಎಎಫ್​ನ ಸದರನ್ ಏರ್​ ಕಮಾಂಡ್​ ಮುಖ್ಯಸ್ಥರಾಗಿ ಮಾರ್ಚ್​ 2017 ರಿಂದ ಆಗಸ್ಟ್ 2018ರವರೆಗೆ ಕಾರ್ಯನಿರ್ವಹಿಸಿದ್ದರು. ನಂತರ ವಾಯುಪಡೆಯ ತರಬೇತಿ ಕಮಾಂಡ್​​ನ ಮುಖ್ಯಸ್ಥರಾಗಿ ಆಗಸ್ಟ್​​ನಿಂದ ಇಲ್ಲಿವರೆಗೆ ಕಾರ್ಯನಿರ್ವಹಿಸುತ್ತಿದ್ದರು.

ವಾಯುಪಡೆಯಲ್ಲಿ 39 ವರ್ಷ ಸೇವೆ ಸಲ್ಲಿಸಿರುವ ಬಧೌರಿಯಾ, ಅತಿ ವಿಶಿಷ್ಟ ಸೇವಾ ಪದಕ, ವಾಯು ಸೇನಾ ಪದಕ, ಪರಮ ವಿಶಿಷ್ಟ ಸೇವಾ ಪದಕಗಳನ್ನು ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ ಭಡೌರಿಯಾ ಅವರನ್ನು ರಾಷ್ಟ್ರಪತಿಗಳ ಸಹಾಯಕ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಐಎಎಫ್​ಗೆ ಬತ್ತಳಿಕೆಗೆ ರಫೇಲ್​ ಯುದ್ಧವಿಮಾನಗಳನ್ನು ಸೇರ್ಪಡೆಗೊಳಿಸುವಲ್ಲಿ ಭಡೌರಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com