ನೀವು ರಾಜ್ಯಗಳನ್ನು ಕಾಲೋನಿಗಳಾಗಿ ಮಾರ್ಪಡಿಸುತ್ತಿದ್ದೀರಿ: ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ....
ಪಿ ಚಿದಂಬರಂ
ಪಿ ಚಿದಂಬರಂ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, ನೀವು ರಾಜ್ಯಗಳನ್ನು ಕಾಲೋನಿಗಳಾಗಿ ಮಾರ್ಪಡಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಚಿದಂಬರಂ ಅವರು, ನೀವು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಮಾಡುತ್ತಿರುವ ಅನ್ಯಾಯವನ್ನು ದೇಶದ ಇತರೆ ರಾಜ್ಯಗಳಿಗೂ ಮಾಡಬಹುದು. ಅಲ್ಲಿನ ಜನರು ಪ್ರಜಾಪ್ರಭುತ್ವದ ಪರವಾಗಿದ್ದಾರೆ. ಆದರೂ ನಿವೇಕೆ ಅದನ್ನು ನಿರಾಕರಿಸುತ್ತೀರಿ ಎಂದು ಪ್ರಶ್ನಿಸಿದರು.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಕೇಂದ್ರದ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಚಿದಂಬರಂ ಅವರು, ಮುಂದೊಂದು ದಿನ ಪಶ್ಚಿಮ ಬಂಗಾಳ ಮತ್ತು ಒಡಿಶಾವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶ ನಿರ್ಮಿಸುವುದಿಲ್ಲ ಎಂದು ಹೇಗೆ ನಂಬುತ್ತೀರಿ? ಈ ಸರ್ಕಾರ ಬೆಂಬಲಿಸುವ ಮುನ್ನ ನೀವು ಯೋಚಿಸಬೇಕಿತ್ತು ಎಂದರು.
ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಕಾನೂನು ಬಾಹೀರವಾಗಿ ವಿಘಟಿಸಿದೆ. ಸರ್ಕಾರದ ಇಂತಹ ನಿರ್ಣಯಗಳು ತನ್ನ ಇಚ್ಚೆಯಂತೆ ಯಾವುದೇ ರಾಜ್ಯವನ್ನು ವಿಘಟಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಭಾರತದ ವಿಘಟನೆ ಪ್ರಾರಂಭವಾದ ಈ ದಿನಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಚಿದಂಬರಂ ವಿಷಾಧ ವ್ಯಕ್ತಪಡಿಸಿದ್ದಾರೆ.
ಭಾರತ ಎನ್ನುವುದು ಹಲವು ರಾಜ್ಯಗಳ ಒಕ್ಕೂಟ. ನೀವು ಈಗ ಏನು ಮಾಡುತ್ತೀದ್ದಿರಿ ಎನ್ನುವ ಅರಿವಿದಿಯೇ? ಇದರ ಪರಿಣಾಮಗಳಿಗೆ ನೀವು ಹೊಣೆಯಾಗುತ್ತೀರಿ ಎಂದು ಮಾಜಿ ಕೇಂದ್ರ ಸಚಿವ ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com