ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ  ನಡೆದು ಬಂದ ದಾರಿ

ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು; ಅವರಿಗೆ 66 ವರ್ಷ ವಯಸ್ಸಾಗಿತ್ತು. ಭಾರತದ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅರುಣ್ ಜೇಟ್ಲಿ ಇನ್ನು ಕೇವಲ ನೆನಪು ಮಾತ್ರ. 
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು; ಅವರಿಗೆ 66 ವರ್ಷ ವಯಸ್ಸಾಗಿತ್ತು. ಭಾರತದ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅರುಣ್ ಜೇಟ್ಲಿ ಇನ್ನು ಕೇವಲ ನೆನಪು ಮಾತ್ರ. 

ಅರುಣ್ ಜೇಟ್ಲಿ ಸಾಗಿ ಬಂದ ಹಾದಿ: 

ಅರುಣ್ ಜೇಟ್ಲಿ  ವಕೀಲರಾಗಿ, ರಾಜಕಾರಣಿಯಾಗಿ, ಅದ್ಭುತ ಮಾತುಗಾರರಾಗಿ, ಭಾಷಣಕಾರರಾಗಿ ಹೆಸರು ಗಳಿಸಿದ್ದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲಾ ಸಚಿವರಾಗಿದ್ದ ಅರುಣ್ ಜೇಟ್ಲಿ, ವಿರೋಧ ಪಕ್ಷಗಳ ಟೀಕೆಗಳನ್ನು ಬಹಳ ಸಮರ್ಥವಾಗಿ ಎದುರಿಸಿ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರು.

  • 1952, ಡಿಸೆಂಬರ್ 28 ರಂದು ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಯ ಪುತ್ರನಾಗಿ ದೆಹಲಿಯಲ್ಲಿ ಜನಿಸಿದರು. ತಂದೆ ಕಿಶನ್ ವಕೀಲರಾಗಿದ್ದರು. ಇದೇ ವೃತ್ತಿಯನ್ನು ಅರುಣ್ ಜೇಟ್ಲಿ ಕೂಡ ಆಯ್ಕೆ ಮಾಡಿಕೊಂಡರು. 1969-70ರಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, 1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‍ನಲ್ಲಿ ವಾಣಿಜ್ಯ ಪದವಿ ಪೂರೈಸಿದರು. 1977 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾ ದಿಂದ ಕಾನೂನು ಪದವಿಯನ್ನೂ ಪಡೆದುಕೊಂಡರು.
  • ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅರುಣ್ ಜೇಟ್ಲಿ, ವಿದ್ಯಾರ್ಥಿ ಜೀವನದಲ್ಲೇ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದರು. ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಪಡೆದಿದ್ದರು. 1974ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು.   70ರ ದಶಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ‌ಬಿವಿಪಿ) ನ ವಿದ್ಯಾರ್ಥಿ ನಾಯಕರಾಗಿದ್ದ ಅರುಣ್ ಜೇಟ್ಲಿ,  1974 ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದ ಅರುಣ್ ಜೇಟ್ಲಿ, 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
  • ಜಯ ಪ್ರಕಾಶ್ ನಾರಾಯಣ್ ಅವರು ಜೇಟ್ಲಿ ಅವರನ್ನು ವಿದ್ಯಾರ್ಥಿಗಳ ರಾಷ್ಟ್ರೀಯ ಸಮಿತಿ ಹಾಗೂ ಯುವ ಸಂಘಟನೆಯ ಸಂಯೋಜಕರಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರಿಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಜೇಟ್ಲಿ, ಪಿಯುಸಿಎಲ್ ಬುಲೆಟಿನ್ ಹೊರತಂದು ಹಲವು ಲೇಖನಗಳನ್ನು ಬರೆದರು.  ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘ ಸೇರ್ಪಡೆಯಾಗಿ ಪೂರ್ಣ ಪ್ರಮಾಣದ ರಾಜಕಾರಣಿಯಾದರು.
  • 1977ರಿಂದ ದೇಶದ ಹಲವಾರು ಹೈಕೋರ್ಟ್‌ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ವಕೀಲರಾಗಿ ಕೆಲಸ ಮಾಡಿದ್ದ ಜೇಟ್ಲಿ ಅವರನ್ನು 1989ರ ವಿ.ಪಿ. ಸಿಂಗ್ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಯಿತು.  ಬೋಫೋರ್ಸ್ ಹಗರಣ ಪ್ರಕರಣದಲ್ಲಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸುವ, ಕಾಗದ ವ್ಯವಹಾರಗಳನ್ನು ನೋಡಿಕೊಳ್ಳುವ ಕೆಲಸವನ್ನು ಜೇಟ್ಲಿ ಸಮರ್ಥವಾಗಿ ನಿರ್ವಹಿಸಿದ್ದರು. ಅರುಣ್ ಜೇಟ್ಲಿಯವರಿಗೆ ಜನತಾದಳದ ಶರದ್ ಯಾದವ್ ಅವರಿಂದ ಹಿಡಿದು ಕಾಂಗ್ರೆಸ್‌ನ ಮಾಧವ್‌ರಾವ್ ಸಿಂಧ್ಯಾ, ಬಿಜೆಪಿಯ ಎಲ್.ಕೆ. ಅಡ್ವಾಣಿಯವರವರೆಗೆ ನೂರಾರು ಕಕ್ಷಿದಾರರು. 
  • ಜೂನ್ 1998ರಲ್ಲಿ ಮಾದಕ ದ್ರವ್ಯ ಹಾಗೂ ಅಕ್ರಮ ಹಣ ವರ್ಗಾವಣೆ ಹಗರಣಗಳಿಗೆ ಸಂಬಂಧಿಸಿದಂತೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಅರುಣ್ ಜೇಟ್ಲಿ  ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಅರುಣ್ ಜೇಟ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ದ ವಿದ್ಯಾರ್ಥಿ ವಿಭಾಗವಾದ ಎ‌ಬಿವಿಪಿಯ ಸಕ್ರಿಯ ಸದಸ್ಯರಾಗಿದ್ದರು. 1999ರ  ಚುನಾವಣೆಯ ಸಮಯದಲ್ಲಿ ಜೇಟ್ಲಿ ಬಿಜೆಪಿ ವಕ್ತಾರರಾಗಿ ನೇಮಕಗೊಂಡರು.
  • ಎನ್‌ಡಿಎ ಒಕ್ಕೂಟದಡಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, 1999 ಅಕ್ಟೋಬರ್ 13 ರಂದು ಅರುಣ್ ಜೇಟ್ಲಿ, ಮಾಹಿತಿ ಹಾಗೂ ಪ್ರಸಾರದ ರಾಜ್ಯ ಸಚಿವರಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡರು.  ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರದ ಕೇಂದ್ರ ಸಚಿವರಾಗಿದ್ದ ರಾಮ್ ಜೇಟ್ಮಲಾನಿ ಅವರು ರಾಜೀನಾಮೆ ನೀಡಿದ ನಂತರ ಜೇಟ್ಲಿಯವರು ಜುಲೈ 23, 2000 ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆಯ ಹೆಚ್ಚುವರಿ ಹೊಣೆಗಾರಿ ಹೊತ್ತುಕೊಂಡರು.
  • 2000 ದ ನವೆಂಬರ್ ನಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಸೇರ್ಪಡೆಗೊಂಡರು. ಜೊತೆಯಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳು ಹಾಗೂ ನೌಕಾಯಾನ ಸಚಿವರಾಗಿ ನೇಮಕಗೊಂಡರು.  ಸಾರಿಗೆ ವಿಧಾನಗಳಿಂದ ಮಂತ್ರಿ ಪದವಿಯ ವಿಂಗಡಣೆಯಾದ ಮೇಲೆ ಮೊದಲ ಬಾರಿಗೆ ಶಿಪ್ಪಿಂಗ್ ಮಂತ್ರಿ ಪದವಿ ಇವರಿಗೆ ಲಭಿಸಿತು. ಸೆಪ್ಟೆಂಬರ್ 1, 2001 ರಲ್ಲಿ ಹಡಗು ಖಾತೆಯ ತೊರೆದರು. ಜುಲೈ 1, 2002 ರಲ್ಲಿಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳ ಖಾತೆಯನ್ನು ತೊರೆದು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದರು. ಅದರ ರಾಷ್ಟ್ರೀಯ ವಕ್ತಾರರರೂ ಆಗಿ ಸೇವೆ ಸಲ್ಲಿಸಿದರು.
  • ಜನವರಿ 2002 ರವರೆಗೆ ಇದೇ ಪದವಿಯಲ್ಲಿ ಮುಂದುವರಿದರು. ಜನವರಿ 2003 ರಲ್ಲಿ ಮತ್ತೊಮ್ಮೆ ಕೇಂದ್ರ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಕಾನೂನು ಮತ್ತು ನ್ಯಾಯಾಂಗ ಖಾತೆಯನ್ನು ವಹಿಸಿಕೊಂಡರು. ಮೇ 2004 ರಲ್ಲಿ ಎನ್‍ಡಿಎ ಸೋತಾಗ ಜೇಟ್ಲಿಯವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಿಂದಿರುಗಿದರು. ಕಾನೂನು ವೃತ್ತಿಯನ್ನು ಮುಂದುವರಿಸಿದರು. ಅವರು ಗುಜರಾತ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.  ಜೂನ್ 3, 2009ರಲ್ಲಿ ಎಲ್.ಕೆ.ಅಡ್ವಾಣಿಯವರಿಂದ ರಾಜ್ಯಸಭೆಯ  ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು.  ಜೂನ್ 16, 2009 ರಂದು ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮಕ್ಕೆ ಬದ್ಧರಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದರು. 
  •  ಬಿರ್ಲಾ ಕಾರ್ಪೊರೇಶನ್ ಲಿಮಿಟೆಡ್ ಒಡೆತನದ ಸುಮಾರು 5೦೦೦ ಕೋಟಿ ರೂ ಗೂ ಹೆಚ್ಚಿನ ಆಸ್ತಿಯ ವಿರುದ್ಧ ಆರ್. ಎಸ್. ಲೋಧಾ ಅವರ ಕಾನೂನು ಸಮರದಲ್ಲಿ ಬಿರ್ಲಾ ಕುಟುಂಬದ ಪರವಾಗಿ ಅರುಣ್ ಜೇಟ್ಲಿಯವರು ವಾದ ಮಾಡಿದ್ದರು. ರಣ್ ಚಿತ್ರದಲ್ಲಿ ರಾಷ್ಟ್ರಗೀತೆಯನ್ನು ತಿರುಚಿ ಬಳಸಿದ್ದಕ್ಕಾಗಿ ರಾಮ್‌‌ ಗೋಪಾಲ್ ವರ್ಮಾ ಅವರ ವಿರುದ್ಧದ ಮೊಕದ್ದಮೆಯಲ್ಲಿ ವರ್ಮಾ ಅವರ ಪರವಾಗಿ ವಾದ ಮಾಡಿದ್ದರು. ಆದರೆ ಆ ಹಾಡನ್ನು ನಂತರದಲ್ಲಿ ಚಿತ್ರದಿಂದ ಕೈಬಿಡಲಾಯಿತು. 2002ರಲ್ಲಿ, ಅರುಣ್ ಜೇಟ್ಲಿಯವರು , ನರೇಂದ್ರ ಮೋದಿಯವರಿಗೆ ಸಹಾಯ ಮಾಡಿದರು,  ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 126 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಸಹಯೋಗ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತು.
  • ಡಿಸೆಂಬರ್ 2007ರಲ್ಲಿ, ಅರುಣ್ ಜೇಟ್ಲಿಯವರು  ಚಳುವಳಿಯನ್ನು ನಡೆಸಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದರು. ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 117 ಸ್ಥಾನ ಪಡೆದುಕೊಂಡಿತು. ನರೇಂದ್ರ ಮೋದಿಯವರು ಅರುಣ್ ಜೇಟ್ಲಿಯವರನ್ನು ಗುಜರಾತ್‌ಗೆ ವರ್ಗಾಯಿಸುವಂತೆ ವಿಶೇಷವಾಗಿ ಪಕ್ಷದ ಹೈಕಮಾಂಡ್ ಅನ್ನು ಕೇಳಿಕೊಂಡರು. ಮೇ 2004ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿಯವರಿಗೆ ಕರ್ನಾಟಕದ ವಿಶೇಷ ಹೊಣೆಯನ್ನು ನೀಡಲಾಗತ್ತು. ದೇಶದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಉತ್ತಮ ಸ್ಥಾನದಲ್ಲಿದೆ ಹಾಗೂ ಉತ್ತಮ ನಿರೀಕ್ಷೆ ಕೂಡಾ ಮಾಡಬಹುದಾಗಿತ್ತು. ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತು, ರಾಜ್ಯದಲ್ಲಿ ಒಟ್ಟು 83 ಸ್ಥಾನಗಳನ್ನು ಪಡೆದುಕೊಂಡು ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿತು.
  • 24 ಮೇ 1982 ರಂದು ಸಂಗೀತಾ ಅವರೊಂದಿಗೆ ಜೇಟ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ಮಗ ರೋಹನ್ ಹಾಗೂ ಮಗಳು ಸೊನಾಲಿ. ಅವರ ಮಗಳು ಸೊನಾಲಿ ಜೇಟ್ಲಿ ಯುವ ವಕೀಲರಾಗಿದ್ದಾರೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿದ್ದಾರೆ. ಜೇಟ್ಲಿ ಕೆಲವು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದು ಅವರಿಗೆ ಮೂತ್ರಕೋಶದ ಕಸಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವರಿಗೆ ಸಾಫ್ಟ್ ಟಿಶ್ಯೂ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿತ್ತು. ಸ್ಥೂಲಕಾಯದಿಂದ ಮುಕ್ತಿ ಪಡೆಯಲು ಅವರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೂ ಸಹ ಒಳಗಾಗಿದ್ದರು. 
  • 66 ವರ್ಷದ ಹಿರಿಯ ನಾಯಕ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬಿಜೆಪಿ ಭಾರಿ ಬಹುಮತದಿಂದ ಗೆದ್ದ ಬಳಿಕ ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಬೇಡಿ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು.  ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಅರುಣ್ ಜೇಟ್ಲಿ  ವೈದಕೀಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿ ತೊಡೆಯಲ್ಲಿದ್ದ ಮೃದು ಅಂಗಾಂಶದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮರಳಿದ್ದರು.
  • ಫೆಬ್ರವರಿ 1 ರಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆರನೇ ಹಾಗೂ ಕೊನೆ ಬಜೆಟ್‌ ಮಂಡಿಸಲು ಸಜ್ಜಾಗಿದ್ದ ಜೇಟ್ಲಿ ಅವರು ಚಿಕಿತ್ಸೆಗಾಗಿ ದಿಢೀರನೆ ಅಮೆರಿಕಕ್ಕೆ ತೆರಳಿದ್ದರಿಂದ ಪಿಯೂಷ್ ಗೋಯಲ್ ಅವರು ಬಜೆಟ್ ಮಂಡಿಸಿದ್ದರು. ಕಳೆದ 15 ದಿನಗಳಿಂದ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರುಣ್ ಜೇಟ್ಲಿ ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com