ಸೋಮವಾರವೂ ಮುಂದುವರೆಯಲಿದೆ ಡಿಕೆಶಿ ಇಡಿ ವಿಚಾರಣೆ

ನೋಟು ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ  ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಎರಡನೇ ದಿನದ ಇಡಿ  ವಿಚಾರಣೆ ಅಂತ್ಯಗೊಂಡಿದೆ. ಸುಮಾರು 28 ಗಂಟೆಗೂ ಹೆಚ್ಚು ಕಾಲ ಶಿವಕುಮಾರ್ ವಿಚಾರಣೆ ನಡೆದಿದ್ದು, ಸೋಮವಾರವೂ ಮುಂದುವರೆಯಲಿದೆ. 
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ನವದೆಹಲಿ: ನೋಟು ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ  ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಎರಡನೇ ದಿನದ ಇಡಿ  ವಿಚಾರಣೆ ಅಂತ್ಯಗೊಂಡಿದೆ. ಸುಮಾರು 28 ಗಂಟೆಗೂ ಹೆಚ್ಚು ಕಾಲ ಶಿವಕುಮಾರ್ ವಿಚಾರಣೆ ನಡೆದಿದ್ದು, ಸೋಮವಾರವೂ ಮುಂದುವರೆಯಲಿದೆ. 

ಇಡಿ ಅಧಿಕಾರಿಗಳ ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸೋಮವಾರವೂ ವಿಚಾರಣೆ ಮುಂದುವರೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಮತ್ತೆ  ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ. ಹಬ್ಬ ಇದೆ ಎಂದರೂ ಸೋಮವಾರ ಬರಬೇಕೆಂದು ಸೂಚಿಸಿದ್ದಾರೆ ಎಂದು ತಿಳಿಸಿದರು. ಇಡಿ ವಿಚಾರಣೆ ಮುಗಿಸಿದ ನಂತರ ಸಂಸದ ಡಿಕೆ ಸುರೇಶ್ ಅವರ ಮನೆಗೆ ಡಿಕೆ ಶಿವಕುಮಾರ್ ತೆರಳಿದರು.

ಶುಕ್ರವಾರ ಸಂಜೆ 5 ಗಂಟೆಗೆ ಹೊಸದಿಲ್ಲಿಗೆ ಬಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾದ  ಡಿಕೆ ಶಿವಕುಮಾರ್‌  ಅವರನ್ನು  ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಮತ್ತೆ ಇಂದು ಬೆಳಗ್ಗೆಯಿಂದಲೂ ರಾತ್ರಿ 8-30ರವರೆಗೂ ವಿಚಾರಣೆ ನಡೆಸಲಾಗಿದೆ. 

2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ ಸುಮಾರು 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿವಕುಮಾರ್ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು.

 ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. 

ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಲು ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಅಲ್ಲದೆ ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com