ಪೌರತ್ವ ತಿದ್ದುಪಡಿ ಮಸೂದೆ: ಈಶಾನ್ಯದಲ್ಲಿ ತಾರಕ್ಕೇರಿದ ಕಿಚ್ಚು, ಹಿಂಸಾಚಾರ, ಹಲವೆಡೆ ಕರ್ಫ್ಯೂ ಜಾರಿ
ಗುವಾಹತಿ: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯುತ್ತಿದ್ದಂತೆಯೇ ಅತ್ತ ಈಶಾನ್ಯ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ.
ಪೌರತ್ವ (ತಿದ್ದುಪಡಿ) ಮಸೂದೆಯು ಈಶಾನ್ಯದಲ್ಲಿ ಹಿಂಸೆಗೆ ಕಾರಣವಾಗಿದ್ದು, ಬೃಹತ್ ಪ್ರತಿಭಟನೆಗೆ ಯಾವುದೇ ಪಕ್ಷ ಕರೆ ನೀಡಿರಲಿಲ್ಲವಾದರೂ, ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅಸ್ಸಾಂ ರಾಜಧಾನಿ ಗುವಾಹತಿ, ದಿಬ್ರುಗಡ, ಜೊಹ್ರತ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಕಿಚ್ಚು ತೀವ್ರಗೊಂಡಿದ್ದರಿಂದ ಅಸ್ಸಾಂನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಗುವಾಹತಿಯಲ್ಲಿರುವ ಸಚಿವಾಲಯದ ಎದುರು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಹಲವು ಜನರು ಹಾಗೂ ಪತ್ರಕರ್ತರಿಗೆ ಗಾಯಗಳಾಗಿವೆ.
ಅಸ್ಸಾಂ, ತ್ರಿಪುರಾದಲ್ಲಿ ಸೇನೆ ನಿಯೋಜನೆ
ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ತಾಳಿದ್ದು, ಹಿಂಸಾಪೀಡಿತ ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 5000 ಅರೆಸೇನಾಪಡೆ ಸಿಬ್ಬಂದಿಯನ್ನು ವಿಶೇಷ ವಿಮಾನಗಳ ಮೂಲಕ ಕಳುಹಿಸಿಕೊಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಪೈಕಿ 2 ಸಾವಿರ ಯೋಧರು ಹಾಗೂ ದೇಶದ ವಿವಿಧ ಭಾಗಗಳಿಂದ 3 ಸಾವಿರ ಯೋಧರನ್ನು ಕರೆಯಿಸಿಕೊಂಡು, ಈಶಾನ್ಯ ರಾಜ್ಯಗಳಿಗೆ ರವಾನಿಸಲಾಗಿದೆ. ಸಿಆರ್‌ಪಿಎಫ್, ಬಿಎಸ್‌ಎಫ್ ಹಾಗೂ ಎಸ್‌ಎಸ್‌ಬಿ ಯೋಧರು ಈ ತಂಡಗಳಲ್ಲಿದ್ದಾರೆ. ತ್ರಿಪುರಾದಲ್ಲಿ ಸೇನಾ ಕಣ್ಗಾವಲು ಹಾಕಲಾಗಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಸೈನಿಕರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಅಲಿಗಡ ವಿ.ವಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್
ಇತ್ತ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಶ್ವವಿದ್ಯಾಲಯದ ಪ್ರವೇಶ ದ್ವಾರಗಳಲ್ಲಿ ಕ್ಷಿಪ್ರ ಕಾರ್ಯಪಡೆ ನಿಯೋಜಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ. ನಿಷೇಧಾಜ್ಞೆ (144 ಸೆಕ್ಷನ್) ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿ ಮುಖಂಡರು ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಾಂತಿಭಂಗ ಆರೋಪದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿವಿಲ್ ಲೈನ್ಸ್ ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಆದರೆ ಮಂಗಳವಾರ ಸಂಜೆ ವಿದ್ಯಾರ್ಥಿಗಳು ನಡೆಸಿದ ಮೆರವಣಿಗೆ ಶಾಂತಿಯುತವಾಗಿತ್ತು ಎಂದು ವಿಶ್ವವಿದ್ಯಾಲಯದ ಶಿಸ್ತುಪಾಲನಾ ಅಧಿಕಾರಿ ಅಫಿಫುಲ್ಲಾ ಖಾನ್ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ