ಮೋದಿ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ: ಬಿಜೆಪಿ ವಿರುದ್ಧ ಸೋನಿಯಾ ವಾಗ್ದಾಳಿ

ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ನರೇಂದ್ರ ಮೋದಿ ಸರ್ಕಾರ ಭಾರತೀಯರನ್ನು...
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ನರೇಂದ್ರ ಮೋದಿ ಸರ್ಕಾರ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ.

ಇಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾರತ್ ಬಚಾವೋ ಸಮಾವೇಶ ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದ ಭಾರತದ ಆತ್ಮ ಚೂರುಚೂರು ಆಗಿದೆ ಎಂದರು.

ಮೋದಿ ಸರ್ಕಾರ ಸಂಸತ್ತಿಗೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳಿಗೆ ಯಾವುದೇ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷೆ, ಸಮಾಜ ಒಡೆಯುವುದು ಮತ್ತು ಜನ ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡುವುದೇ ಅವರ ಅಜೆಂಡಾ ಎಂದರು.

ಸ್ವಾತಂತ್ರ್ಯ ಹೋರಾಟಗಾರರು ಈ ದೇಶಕ್ಕಾಗಿ ಮತ್ತು ಸಂವಿಧಾನಕ್ಕಾಗಿ ಸಾಕಷ್ಟು ಹೋರಾಡಿದ್ದಾರೆ. ಆದರೆ ಮೋದಿ ಸರ್ಕಾರ ಈಗ ಸಂವಿಧಾನವನ್ನೇ ನಾಶಮಾಡುತ್ತಿದೆ ಎಂದು ದೂರಿದರು.

"ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಆತ್ಮವನ್ನು ಹರಿದು ಹಾಕುತ್ತಿದ್ದರೂ ಮೋದಿ ಮತ್ತು ಶಾ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ ಅವರು, ಸಂವಿಧಾನಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ನಮ್ಮ ಅನೇಕ ನಾಯಕರು ಹೋರಾಡಿದ್ದರು ಎಂದು ಹೇಳಿದರು. "ಜನರ ಹಕ್ಕುಗಳ ರಕ್ಷಣೆಗೆ ಯಾವುದೇ ರೀತಿಯ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ . ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ನಮ್ಮ ದೇಶ ಮತ್ತು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಶಪಥ ಮಾಡಿದರು.

ಭಾರತಕ್ಕಾಗಿ ಹೋರಾಡಲು ಎಲ್ಲರೂ ಒಗ್ಗಟ್ಟಾಗುವ ಸಮಯ ಬಂದಿದೆ ಎಂದು ಹೇಳಿದ ಸೋನಿಯಾ, ಅನ್ಯಾಯವನ್ನು ಸಹಿಸಿಕೊಳ್ಳುವುದು ದೊಡ್ಡ ಅಪರಾಧ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಇಂದು ಧ್ವನಿ ಎತ್ತಬೇಕಾದ ಸಮಯ ಬಂದಿದೆ ಎಂದು ಹೇಳಿದರು.

ಸಾಂವಿಧಾನಿಕ ತಿದ್ದುಪಡಿ ಮಸೂದೆ (ಸಿಎಬಿ) ಅನುಷ್ಠಾನವು 'ಅಸಂವಿಧಾನಿಕ' ಮತ್ತು 'ಭಾರತದ ನೀತಿಗಳ ಮೇಲಿನ ಆಕ್ರಮಣ' ಎಂದು ಹೇಳಿದ ಅವರು, ಈಗ ಸಮಯ ಬಂದಿದೆ. ದೇಶವನ್ನು ಉಳಿಸಲು ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ 'ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್' ಎಂಬ ಘೋಷಣೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷರು, ಇಂದು ಇಡೀ ದೇಶವು 'ಸಬ್‌ ಕಾ ಸಾಥ್ ಮತ್ತು ಸಬ್‌ ಕಾ ವಿಕಾಸ್' ಎಲ್ಲಿದೆ ಎಂದು ಕೇಳುತ್ತಿದೆ ಎಂದರು.

"ಇಂದು ಉದ್ಯೋಗ ಎಲ್ಲಿದೆ? ಕಪ್ಪು ಹಣ ಎಲ್ಲಿದೆ ? ಯಾರ ಬಳಿ ಇದೆ? ಭರವಸೆಯಂತೆ ಕಪ್ಪು ಹಣವನ್ನು ಏಕೆ ಮರಳಿ ತರಲು ಸಾಧ್ಯವಿಲ್ಲ ಎಂಬದರ ಬಗ್ಗೆ ಯಾಕೆ ತನಿಖೆ ನಡೆಯಬಾರದು ಎಂದು ಅವರು ಪ್ರಶ್ನಿಸಿದರು.

ದೇಶದ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ, ಎನ್‌ಡಿಎ ಸರ್ಕಾರವು ಆರ್ಥಿಕತೆಯನ್ನು ದುರುಪಯೋಗಪಡಿಸಿಕೊಂಡಿದೆ ಮತ್ತು ಬ್ಯಾಂಕುಗಳಲ್ಲಿರುವ ನಿಮ್ಮ ಹಣ ಸಹ ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರ ಜನರತ್ತ ಗಮನ ಹರಿಸುತ್ತಿಲ್ಲ. ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ಹೊರಹಾಕಿದರು. ಸರ್ಕಾರದ ವಿರುದ್ಧ ನಿಲ್ಲುವಂತೆ ಎಲ್ಲರಿಗೂ ಕರೆ ನೀಡಿದ ಪ್ರಿಯಾಂಕಾ, ಒಂದು ಸರ್ಕಾರದ ವಿರುದ್ಧ ನಿಲ್ಲದಿದ್ದರೆ, ಈ ಸರ್ಕಾರದಿಂದ ಬಾಬಾ ಸಾಹೇಬ್​ ಅಂಬೇಡ್ಕರ್​ ರಚನೆಯ ಸಂವಿಧಾನ ನಾಶವಾಗುವ ಸಮಯ ಬಹಳ ದೂರದಲ್ಲಿಲ್ಲ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ “ಭಾರತ್​ ಬಚಾವೋ” (ಭಾರತ ರಕ್ಷಿಸಿ) ಎಂಬ ಬೃಹತ್​ ಸಮಾವೇಶವನ್ನು ನಡೆಸುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಘಟಾನುಘಟಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com